ವೈದ್ಯರ ನಿರ್ಲ‌ಕ್ಷ್ಯದಿಂದ ಎರಡು ಬಲಿ: ಸರ್ಕಾರದ ಕ್ರಮವೇನು ಎಂದ ಶಾಸಕಿ

ಬುಧವಾರ, 25 ಮಾರ್ಚ್ 2015 (15:38 IST)
ಮಂಗಳೂರಿನ ಪುತ್ತೂರು ತಾಲೂಕಿನ ಹಳ್ಳಿಯೊಂದರಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿನ ವೈದ್ಯರ ಬೇಜವಾಬ್ದಾರಿತನದಿಂದ ಎರಡು ಜೀವಗಳು ಬಲಿಯಾಗಿವೆ. ಈ ಸಂಬಂಧ ಸರ್ಕಾರ ಯಾವ ರೀತಿಯ ಕ್ರಮವನ್ನು ಕೈಗೊಂಡಿದೆ. ಎಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅವರು ಇಂದು ಆರೋಗ್ಯ ಸಚಿವರನ್ನು ಪ್ರಶನಿಸಿದರು. 
 
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಶಾಸಕಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಳ್ಳಿಯೊಂದರಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಳೆದ ಮಾರ್ಚ್ 10ರಂದು ಆಯೋಜಿಸಲಾಗಿತ್ತು. ಸರ್ಕಾರದ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿದ್ದ ಈ ಶಿಬಿರದಲ್ಲಿ ಸಾಕಷ್ಟು ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ವೇಳೆ ನಾಲ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವೈದ್ಯರ ಬೇಜವಾಬ್ದಾರಿ ತನದಿಂದ ಎರಡು ಜೀವಗಳು ಹೋಗಿವೆ. ಅಲ್ಲದೆ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಮತ್ತೊಂದು ವಿಶೇಷವೆಂದರೆ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲಾಗಿ ಪತಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಇದರಿಂದ ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣ ಸಂಬಂಧ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
 
ಬಳಿಕ ಶಾಸಕಿಯ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಈಗಾಗಲೇ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಲಾಗಿರುವ ಈ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ನಿರ್ದೇಶಕರನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಂಪೂರ್ಣ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 
 
ನಗರದ ಖಾಸಗಿ ಆಸ್ಪತ್ರೆಯಾದ ಮಂಗಳೂರಿನ ಓಮೇಗಾ ಆಸ್ಪತ್ರೆ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹಸೀನಾ(10) ಎಂಬ ಯುವತಿ ಸೇರಿ ಇಬ್ಬರು ಸಾವನ್ನಪ್ಪಿದ್ದರು.  

ವೆಬ್ದುನಿಯಾವನ್ನು ಓದಿ