ಬಾಲಕರಿಂದ ಸಾಮೂಹಿಕ ಅತ್ಯಾಚಾರ: ಪರಾರಿಯಾಗಿದ್ದ ಆರೋಪಿಯ ಬಂಧನ

ಸೋಮವಾರ, 4 ಮೇ 2015 (11:38 IST)
6 ವರ್ಷದ ಪುಟ್ಟ ಬಾಲಕಿಯ ಮೇಲೆ  ಹೈಸ್ಕೂಲ್ ಓದುತ್ತಿರುವ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಇಂದು ಇನ್ನೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಶನಿವಾರ ಈ ಘಟನೆ ನಡೆದಿತ್ತು. 


 
ಶನಿವಾರ ಮಧ್ಯಾಹ್ನ ತನ್ನ ಸಹೋದರರು ಮತ್ತು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಇಬ್ಬರು ಹುಡುಗರು ಆಕೆಯ ಅಣ್ಣಂದಿರ ಕಣ್ಣು ತಪ್ಪಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದರು.
 
ಕೆಲ ಹೊತ್ತಿನ ಬಳಿಕ ತಂಗಿಯನ್ನು ಹುಡುಕುತ್ತಾ ಕೃತ್ಯ ನಡೆದ ಸ್ಥಳಕ್ಕೆ ಬಂದ ಸಹೋದರ ನಡೆದ ಸಂಗತಿಯನ್ನು ಅರಿತು ಮನೆಗೆ ಓಡಿ ಹೋಗಿ ಅಜ್ಜ- ಅಜ್ಜಿಯರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ದ ಪೋಷಕರು ಪೊಲೀಸರಲ್ಲಿ ದೂರು ನೀಡಿದ್ದರು. 
 
ಪೋಸ್ಕೋ ಮತ್ತು ಐಪಿಸಿಯ ವಿವಿಧ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಘಟನೆ ನಡೆದ ದಿನವೇ ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು. ಪರಾರಿಯಾಗಿದ್ದ ಇನ್ನೊಬ್ಬ ಬಾಲಕ ಕೂಡ ಇಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ವೆಬ್ದುನಿಯಾವನ್ನು ಓದಿ