ಹಿಂಸಾಸ್ವರೂಪಕ್ಕೆ ತಿರುಗಿದ ವಿಬ್‌ಗಯಾರ್ ವಿರುದ್ಧ ಪ್ರತಿಭಟನೆ

ಸೋಮವಾರ, 21 ಜುಲೈ 2014 (13:11 IST)
ಕಳೆದ ಐದು ದಿನಗಳಿಂದ ವಿಬ್‌ಗಯಾರ್ ಶಾಲೆಯ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಪ್ರಕರಣದ ವಿರುದ್ಧ ನಾನಾ ಸಂಘ, ಸಂಸ್ಥೆಗಳು ಮತ್ತು ಪೋಷಕರು, ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪಕ್ಕೆ ಇಂದು ತಿರುಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ಶಾಲಾ ಆವರಣದ ಮುಂದೆ ಎಬಿವಿಪಿ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು. ಶಾಲೆಯ ಆಡಳಿತ ಮಂಡಳಿ ಪೋಷಕರ ಜೊತೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಅವರು ಆಗ್ರಹವಾಗಿತ್ತು. ಪೊಲೀಸರ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದರು ಮತ್ತು ಬ್ಯಾರಿಕೇಡ್ ಮುರಿದು ಒಳನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್‌ಗೆ ಮುಂದಾದರು.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಿದರು.  ಪೊಲೀಸರ ಲಾಠಿ ಚಾರ್ಚ್‌ನಿಂದ ಅನೇಕ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.  ಬಿಜೆಪಿ ಯುವಮೋರ್ಚಾ ಇಂದು ಬೆಂಗಳೂರಿನ ಆನಂದ ರಾವ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿ ವ್ಯಾನ್‌ನೊಳಗೆ ತಳ್ಳಿದರು. 

ವೆಬ್ದುನಿಯಾವನ್ನು ಓದಿ