ಸ್ಕೇಟಿಂಗ ಬೋಧಕ ಮುಸ್ತಫಾ ವಿಕೃತ ಮನಸ್ಥಿತಿಯ ವ್ಯಕ್ತಿ: ಔರಾದ್ಕರ್

ಸೋಮವಾರ, 21 ಜುಲೈ 2014 (18:43 IST)
ಬೆಂಗಳೂರಿನ ಪ್ರತಿಷ್ಠಿತ ಶಾಲೆ ವಿಬ್‌ಗಯಾರ್‌ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ  ಬಂಧಿತನಾದ ಸ್ಕೇಟಿಂಗ್ ಬೋಧಕ ಮುಸ್ತಫಾ ರೇಪ್‌ಗೊಳಗಾದ ಶಾಲಾ ಮಕ್ಕಳ ವಿಡಿಯೋಗಳನ್ನು ಸಂಗ್ರಹಿಸಿ ಲ್ಯಾಪ್‌ಟಾಪ್‌ನಲ್ಲಿಡುತ್ತಿದ್ದ.  30 ವರ್ಷ ವಯಸ್ಸಿನ ಮುಸ್ತಫಾ ವಿಬ್‌ಗಯಾರ್ ಹೈಸ್ಕೂಲ್‌ನಲ್ಲಿ 2011ರಿಂದ ಮಕ್ಕಳಿಗೆ ತರಬೇತಿ ನೀಡುತ್ತಿದ್ದನೆಂದು ಹೇಳಲಾಗಿದೆ. 

ಈ ಶಾಲೆಯಲ್ಲಿ ಮತ್ತು ಅವನು ಕೆಲಸ ಮಾಡಿದ್ದ ಮುಂಚಿನ ಶಾಲೆಯಲ್ಲಿ ಬೇರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದನ್ನು ಮಾನಪಮಾನದ ದೃಷ್ಟಿಯಿಂದ ಬಹಿರಂಗ ಮಾಡದೇ ಮುಚ್ಚಿಟ್ಟಿರಬಹುದೆಂದು ಶಂಕಿಸಲಾಗಿದೆ.   ಈ ದುಷ್ಕರ್ಮಿಯ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಪೊಲೀಸರು ಅಶ್ಲೀಲ ಚಿತ್ರಗಳನ್ನು ಪತ್ತೆಹಚ್ಚಿದರು. ಲ್ಯಾಪ್‌ಟಾಪ್‌ನಲ್ಲಿ ರೇಪ್‌ಗೊಳಗಾದ ಶಾಲಾಮಕ್ಕಳ ವಿಡಿಯೋಗಳಿದ್ದು, ಅವುಗಳನ್ನು ಇಂಟರ್ನೆಟ್‌ನಿಂದ ಡೌನ್ಲೋಡ್ ಮಾಡುತ್ತಿದ್ದ. ಇದು ಅವನ  ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.
 
ಮುಸ್ತಾಫಾ ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು ಕಂಡುಬಂದ ಬಳಿಕ ವೈಟ್‌ಫೀಲ್ಡ್‌ನಲ್ಲಿರುವ ಇನ್ನೊಂದು ಶಾಲೆ ಅವನನ್ನು ಈ ಮೊದಲು ಸೇವೆಯಿಂದ ವಜಾ ಮಾಡಿತ್ತು. ಆದರೆ ವಿಷಯವನ್ನು ಪೊಲೀಸರಿಗೆ ತಿಳಿಸದೇ ಮುಚ್ಚಿಟ್ಟಿದ್ದರು. ಮಾರತ್ ಹಳ್ಳಿ ಶಾಲೆ ಅವನ ಪೂರ್ವಾಪರಗಳನ್ನು ವಿಚಾರಿಸದೇ ಕೆಲಸಕ್ಕೆ ತೆಗೆದುಕೊಂಡಿತ್ತು. ಆರೋಪಿ ಇನ್ನೂ ಕೆಲವು ಮಕ್ಕಳ ಲೈಂಗಿಕ ದೌರ್ಜನ್ಯಪ್ರಕರಣಗಳಲ್ಲಿ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದ ಫೂಟೇಜ್‌ನಲ್ಲಿ ಮುಸ್ತಾಫಾ 6 ವರ್ಷದ ಮಗುವನ್ನು ಜುಲೈ 3ರಂದು ಕೋಣೆಗೆ ಎಳೆಯುತ್ತಿದ್ದ ದೃಶ್ಯವಿದೆ. ಬಾಲಕಿ ಅಳುತ್ತಿದ್ದ ದೃಶ್ಯ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. 
 
.  ಎರಡನೇ ಆರೋಪಿಗಾಗಿ ಕೂಡ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವಿಬ್‌ಗಯಾರ್ ಶಾಲೆಯ ಪ್ರಕರಣದ ಬಳಿಕ ಬೆಂಗಳೂರಿನ ಇತರೆ ಶಾಲೆಗಳು ತಮ್ಮ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ. ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ಪೋಷಕರು ಅಥವಾ ಶಾಲೆ ಬಸ್ಸುಗಳಲ್ಲಿ ಬಾಲಕಿಯನ್ನು ಕರೆದೊಯ್ಯಲು ಹೊಸ ಪಾಸ್ ವ್ಯವಸ್ಥೆಯನ್ನು ಮಾಡಿರುವುದಾಗಿ ಶಾಲೆ ಮಾಹಿತಿ ನೀಡಿದೆ. 

ವೆಬ್ದುನಿಯಾವನ್ನು ಓದಿ