ಆಯುಧ ಪೂಜೆಯಂದೇ ವಿಜಯದಶಮಿ ಮೆರವಣಿಗೆ: ಸರ್ಕಾರದ ತೀರ್ಮಾನಕ್ಕೆ ಅರಸ್ ಆಕ್ರೋಶ

ಶನಿವಾರ, 3 ಅಕ್ಟೋಬರ್ 2015 (11:40 IST)
ಈ ಬಾರಿಯ ದಸರಾದ ವಿಜಯ ದಶಮಿ ಮೆರವಣಿಗೆಯನ್ನು ಆಯುಧ ಪೂಜೆ ದಿನವಾದ ಅ.22ರಂದೇ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಇತಿಹಾಸಕಾರ ಪ್ರೊ. ನಂಜರಾಜ ಅರಸ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ದಸರಾದಲ್ಲಿ ಹಮ್ಮಿಕೊಳ್ಳುವ ಅತಿ ಪ್ರಖ್ಯಾತ ವಿಜಯದಶಮಿ ಮೆರವಣಿಗೆಯನ್ನು ಸರ್ಕಾರವು ಈ ಹಿಂದೆ ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮುನ್ನವೇ ನಡೆಸುತ್ತಿದ್ದು, ಇದು ಮೌಢ್ಯದ ಆಧಾರದ ಮೇಲೆ ಕೈಗೊಂಡಿರುವ ನಿರ್ಧಾರವಾಗಿದೆ. ಸರ್ಕಾರ ಈ ಹಿಂದೆ ಮೌಢ್ಯತೆಯನ್ನು ತೊಡೆದು ಹಾಕಲು ಕಾನೂನು ತುರುತ್ತೇವೆ ಎಂದು ಹೇಳುತ್ತಿತ್ತು. ಆದರೆ ಪ್ರಸ್ತುತ ಸರ್ಕಾರವೇ ಮೌಢ್ಯದ ಆಧಾರದ ಮೇಲೆ ನಡೆಯುತ್ತಿದ್ದು, ವಿಜಯದಶಮಿ ಮೆರವಣಿಗೆಗೆ ಜ್ಯೋತಿಷ್ಯರಿಂದ ಶಾಸ್ತ್ರ ಕೇಳುವ ಮೂಲಕ ನಡೆಯುತ್ತಿದೆ. ಆ ಮೂಲಕ ಇಡೀ ದಸರಾ ಸಂಭ್ರಮಕ್ಕೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ. 
 
ಬಳಿಕ, ಈ ಬಾರಿಯ ದಸರಾ ಬಗ್ಗೆ ಸರ್ಕಾರ ಈಗಾಗಲೇ ಕ್ಯಾಲೆಂಡರ್‌ನಲ್ಲಿ ದಿನಾಂಕವನ್ನು ನಿಗದಿಗೊಳಿಸಿದೆ. ಅದರಂತೆ ವಿಜಯ ದಶಮಿ ಮೆರವಣಿಗೆಯು ಅ.23ರಂದು ನಡೆಯಬೇಕಿತ್ತು. ಆದರೆ ಅ.22ರಂದು ಆಯುಧ ಪೂಜೆ ಇದ್ದು, ಅಂದೇ ಮೆರವಣಿಗೆಯನ್ನೂ ಮುಗಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಅರಮನೆಯಲ್ಲಿ ಆಯುಧ ಪೂಜೆ ನಡೆಯುವ ಸಾಕಷ್ಟು ಕಾರ್ಯಕ್ರಮಗಳಿಗೆ ಅಡ್ಡಿಯಾಗುವುದಲ್ಲದೆ ಸಾರ್ವಜನಿಕರಿಗೆ ಯಾವುದನ್ನೂ ಸರಿಯಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಎರಡೂ ಕಾರ್ಯಕ್ರಮಗಳು ಒಂದೇ ದಿನ ಇರುವ ಕಾರಣ ಎಲ್ಲದಕ್ಕೂ ತೊಂದರೆಯುಂಟಾಗುತ್ತದೆ. ಇದೆಲ್ಲವೂ ಕೂಡ ಜ್ಯೋತಿಷಿಗಳ ಮುಖಾಂತರ ಅಭಿಪ್ರಾಯ ಪಡೆದು ನಡೆಯುತ್ತಿದ್ದು, ಸರ್ಕಾರ ಮೌಢ್ಯತೆಗೆ ಮಾರು ಹೋಗಿದೆ ಎಂದು ದೂರಿದರು. 
 
ಇನ್ನು ನಿನ್ನೆ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದ ಮೈಸೂರು ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು, ಈ ಹಿಂದೆ ನಿಗದಿಪಡಿಸಿದ್ದ ದಿನಾಂಕ(ಅ.23)ದಂದು ವಿಜಯದಶಮಿ ನಡೆಸದೆ ಅದರ ಮುಂದಿನ ದಿನವಾದ ಆಯುಧ ಪೂಜೆಯಂದೇ ವಿಜಯದಶಮಿ ಮೆರವಣಿಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಸ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ