ಬಿಎಸ್‌ವೈ ನಿರ್ಧಾರದಿಂದ ನಮಗೆ ನೋವಾಗಿದೆ: ಈಶ್ವರಪ್ಪ ಬಣ

ಸೋಮವಾರ, 6 ಮಾರ್ಚ್ 2017 (16:34 IST)
ಜಿಲ್ಲಾಧ್ಯಕ್ಷರ ಮತ್ತು ಇತರ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಮಗೆ ನೋವು ತಂದಿದೆ ಎಂದು ಅತೃಪ್ತ ಬಣದ ಮುಖಂಡ ಸೊಗಡು ಶಿವಣ್ಣ ಹೇಳಿದ್ದಾರೆ. 
 
ಶಾಸಕರ ಭವನದಲ್ಲಿ ತುರ್ತುಸುದ್ದಿಗೋಷ್ಠಿ ನಡೆಸಿದ ಸೊಗಡು ಶಿವಣ್ಣ,  ಜಿಲ್ಲಾವಾರು ಪ್ರವಾಸ ಮಾಡಿ ನೊಂದವರ ಹೇಳಿಕೆಗಳನ್ನು ಪಡೆದು ವರದಿ ತಯಾರಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರವಾನಿಸಲಾಗುವುದು.ಮಾರ್ಚ್ 15ರೊಳಗೆ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಅಮಿತ್ ಶಾ  ಮೊರೆಹೋಗುತ್ತೇವೆ ಎಂದು ತಿಳಿಸಿದ್ದಾರೆ. 
 
ಮತ್ತೊಬ್ಬ ಬಿಜೆಪಿ ಮುಖಂಡ ಭಾನುಪ್ರಕಾಶ್ ಮಾತನಾಡಿ, ಬಿಎಸ್‌ವೈ ನಿರ್ಧಾರ ನೋವು ತಂದಿದೆ. ನಮ್ಮ ಅಹವಾಲುಗಳನ್ನು ಕೇಳಲು ಸಿದ್ದರಿಲ್ಲ. ಕಳೆದ ಹಲವು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿ ದುಡಿದವರಿಗೆ ಗೌರವ ದೊರೆಯುತ್ತಿಲ್ಲ. ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ಮಾತ್ರ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.
 
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ, ಫೆಬ್ರವರಿ 10 ರೊಳಗೆ ಯಡಿಯೂರಪ್ಪ, ಸಂತೋಷಜಿ ಮತ್ತು ಮುರಳಿಧರ್ ಸೇರಿದಂತೆ ನಾಲ್ವರ ಸಮಿತಿ ರಚಿಸಿ ಸಮಸ್ಯೆಗಳನ್ನು ಪರಿಹರಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದರು. ಆದರೆ, ಯಡಿಯೂರಪ್ಪ ಅಮಿತ್ ಶಾ ಆದೇಶ ಉಲ್ಲಂಘಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ನಾವು ಕೂಡಾ ಪಕ್ಷಕ್ಕಾಗಿ ದುಡಿದಿದ್ದೇವೆ. ಆದ್ರೆ ನಮಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಜಿಲ್ಲಾವಾರು ಪ್ರವಾಸ ಮಾಡಿ ಸಮಸ್ಯೆಗಳ ಪಟ್ಟಿ ಮಾಡಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸುತ್ತೇವೆ ಎಂದು ಬಿಜೆಪಿ ಮುಖಂಡ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ