ರಾಜ್ಯಪಾಲರ ಅನುಮತಿ ಪಡೆದು ದಾವೆ ಹೂಡುತ್ತೇವೆ: ಸದಾನಂದಗೌಡ

ಶನಿವಾರ, 31 ಜನವರಿ 2015 (16:14 IST)
ಅರ್ಕಾವತಿ ಡಿ ನೋಟಿಫಿಕೇಶನ್ ಹಗರಣ ಕುರಿತಂತೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರು ಪ್ರತಿಕ್ರಿಯಿಸಿದ್ದು, ಹಗರಣ ಸಂಬಂಧ ಬಿಜೆಪಿ ಈಗಾಗಲೇ ಕಾನೂನು ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದು, ಕೊನೆಯದಾಗಿ ರಾಜ್ಯಪಾಲರಿಂದ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನ್ಯಾಯಾಲಯದಲ್ಲಿ ದಾವೆ ಹೂಡಲಿದೆ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಚಿವರು ಹಗರಣಕ್ಕೆ ಸಂಬಂಧಿಸಿದ ಹಲವು ಕಡತಗಳನ್ನು ತಿದ್ದುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ನಡೆಸಬೇಕಾದ ಹೋರಾಟಗಳನ್ನು ನಾವು ಈಗಾಗಲೇ ಮಾಡಿದ್ದೇವೆ. ಅಲ್ಲದೆ ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯ ಮಾಹಿತಿಯನ್ನೂ ಕೂಡ ಕಲೆ ಹಾಕುತ್ತಿದ್ದೇವೆ. ಇನ್ನು ಕೊನೆಯ ಹಂತದಲ್ಲಿ ರಾಜ್ಯಪಾಲರಿಂದ ಅನುಮತಿ ಪಡೆದು ನ್ಯಾಯಾಲಯದಲ್ಲಿ ಧಾವೆ ಹೂಡಲಿದ್ದೇವೆ ಎಂದರು. 
 
ಬಳಿಕ ಮಾತನಾಡಿದ ಅವರು, ಜೆಡಿಎಸ್ ನಾಯಕರೂ ಕೂಡ ಹಗರಣಕ್ಕೆ ಸಂಬಂಧಿಸಿದಂತೆ ಹಾವು ಬಿಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದ್ಯಾಗ, ಯಾವ ಹಾವು ಬಿಡುತ್ತಾರೋ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. 
 
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಕಾವತಿ ಬಡಾವಣೆಗೊಳಪಡುವ ಸಾಕಷ್ಟು ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಕೊಡಲಾಗಿದ್ದು, ಸರ್ಕಾರಕ್ಕೆ ಸುಮಾರು 16000 ಕೋಟಿ ನಷ್ಟವಾಗಿದೆ. ಆ ಭೂಮಿ ಭೂ ಸ್ವಾಧೀನ ಕಾಯಿದೆ ಅಡಿಯಲ್ಲಿ ಸಾರ್ವಜನಿಕ ಆಸ್ತಿ ಎಂಬುದು ಬಿಜೆಪಿ ಮಾಡುತ್ತಿರುವ ಆರೋಪ.  

ವೆಬ್ದುನಿಯಾವನ್ನು ಓದಿ