ರಾಜ್ಯದ 6 ಕೋಟಿ ಮನೆಗಳಿಗೂ ಎಲ್ಇಡಿ ಬಲ್ಬ್ ವಿತರಣೆ: ಡಿಕೆಶಿ

ಸೋಮವಾರ, 5 ಅಕ್ಟೋಬರ್ 2015 (14:50 IST)
ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ನಗರದ ವಿಕಾಸಸೌಧದಲ್ಲಿ ಎಲ್ಇಡಿ ಬಲ್ಬ್ ಉತ್ಪಾದಕರು ಹಾಗೂ ವಿದ್ಯುತ್ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯದಲ್ಲಿರುವ 6 ಕೋಟಿ ಮನೆಗಳಿಗೂ ಕೂಡ ಎಲ್ಇಡಿ ಬಲ್ಬ್‌ನ್ನೇ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ.
 
ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ನಾನಾ ರೀತಿಯ ಬಲ್ಬ್‌ಗಳನ್ನು ಬಳಸುವ ಮೂಲಕ ಸಾರ್ವಜನಿಕರು ಹೆಚ್ಚು ಹೆಚ್ಚು ಬಿಲ್ ಪಾವತಿಸುವಂತಾಗುತ್ತಿದೆ. ಅಲ್ಲದೆ ಇದರಿಂದ ವಿದ್ಯುತ್ ಕೂಡ ಅಗಾಧ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ನ್ನು ಕಡಿಮೆ ಪ್ರಮಾಣದಲ್ಲಿ ಎಳೆದುಕೊಳ್ಳುವ ಹಾಗೂ ಪ್ರಕಾಶ ಮಾನವಾಗಿ ಬೆಳಗುವ ಎಲ್ಇಡಿ ಬಲ್ಬ್‌ಗಳನ್ನು ರಾಜ್ಯದಲ್ಲಿನ 6 ಕೋಟಿ ಮನೆಗಳಿಗೂ ಕೂಡ ಕಡಿಮೆ ದರದಲ್ಲಿ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕ್ರಮಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು. 
 
ಇದೇ ವೇಳೆ, ಉತ್ಪಾದಕರು ನಮಗೆ ಬಲ್ಬ್‌ನ ವ್ಯಾಟ್‌ನ ಬೆಲೆ ಹೆಚ್ಚು ಬೀಳುತ್ತದೆ. ಹಾಗಾಗಿ ಕಡಿಮೆ ದರದಲ್ಲಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ ಎಂದ ಸಚಿವರು, ಶೀಘ್ರದಲ್ಲಿಯೇ ದರ ನಿಗದಿಗೊಳಿಸಿ ರಾಜ್ಯದೆಲ್ಲೆಡೆ ಎಲ್ಇಡಿ ಬಲ್ಬ್ ಬಳಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. 
 
ಬಳಿಕ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳ ವಿದ್ಯುತ್ ಬಿಲ್ ವಾರ್ಷಿಕವಾಗಿ 14 ಕೋಟಿ ರೂ. ನಷ್ಟು ದರ ಬರುತ್ತಿದ್ದು, ಇದು ಅಧಿಕ ಪ್ರಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿನ ಬೀದಿ ದೀಪಗಳಿಗೂ ಕೂಡ ಎಲ್ಇಡಿ ಬಲ್ಬ್‌ಗಳನ್ನೇ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. 

ವೆಬ್ದುನಿಯಾವನ್ನು ಓದಿ