ವೈಯಕ್ತಿಕ ವಿಚಾರ ತೆಗೆದರೆ ನಾವು ಬುದ್ಧಿಕಲಿಸುತ್ತೇವೆ: ರಮ್ಯಾ ವಿರುದ್ಧ ಪುಟ್ಟರಾಜು ವಾಗ್ದಾಳಿ

ಬುಧವಾರ, 17 ಫೆಬ್ರವರಿ 2016 (15:18 IST)
ಎಚ್.ಡಿ.ಕುಮಾರಸ್ವಾಮಿ ಕುರಿತು ರಮ್ಯಾ ಹೇಳಿಕೆ ಬಾಲಿಷವಾದ ನಡವಳಿಕೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಬುದ್ಧಿಹೇಳಬೇಕು. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗೆ ಇಲ್ಲ.  ಅವರು ಬಂದಿರುವುದು ಓಟ್ ಕೇಳಲಿಕ್ಕೆ. ಅದನ್ನು ಮುಗಿಸಿಕೊಂಡು ಹೋಗಲಿ ಎಂದು ಸಂಸದ ಪುಟ್ಟರಾಜು ರಮ್ಯಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಜಿಲ್ಲೆಗೋಸ್ಕರ , ರೈತರಿಗೋಸ್ಕರ ದೇವೇಗೌಡರು, ಕುಮಾರಣ್ಣ, ರೇವಣ್ಣ ಏನು ಮಾಡಿದ್ದಾರೆಂದು ನಮಗೆ ಗೊತ್ತು.  ಸದನದಲ್ಲಿ ಇವತ್ತು ನಾನು ಸಕ್ರಿಯವಾಗಿ ಭಾಗವಹಿಸಿ ರೈತರ ಏಳಿಗೆಗೆ ಧ್ವನಿ ಎತ್ತಿದ್ದೇನೆ. ವೈಯಕ್ತಿಕವಾದ ವಿಚಾರಗಳನ್ನು ತೆಗೆದರೆ ನಾವು ಅವರಿಗೆ ಬುದ್ಧಿಕಲಿಸುತ್ತೇವೆ. ಈ ಜಿಲ್ಲೆಯ ಜನರೂ ಅವರಿಗೆ ಬುದ್ಧಿ ಕಲಿಸುತ್ತಾರೆ. ಇವರ ಮೂಲಗಳ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕಗಟ್ಟಲೆ ಇದೆ ಎಂದೂ ಪುಟ್ಟರಾಜು ಟೀಕಿಸಿದರು. 
 
 ಪುಟ್ಟರಾಜು ಟೀಕೆಗೆ ಪ್ರತಿಕ್ರಿಯಿಸಿರುವ ರಮ್ಯಾ, ಕಳೆದ ಮೂರು ವರ್ಷಗಳಿಂದ ನಾನು ಟೀಕೆಗಳನ್ನು ಸಹಿಸಿಕೊಂಡು ಬಂದಿದ್ದೇನೆ. ನಾನು ತಂದೆಯನ್ನು ಕಳೆದುಕೊಂಡಾಗ ರಮ್ಯಾ ತಂದೆ ಯಾರು, ರಮ್ಯಾ ಟೆಸ್ಟ್ ಟ್ಯೂಬ್ ಬೇಬಿಯಾ ಎಂದು ಕೇಳಿದ್ದರು. ಇತ್ತೀಚೆಗೆ ಸಭೆಯೊಂದರಲ್ಲಿ ಕುಮಾರಸ್ವಾಮಿ ರಮ್ಯಾ ಕಾಲ್ಗುಣ ಸರಿಯಿಲ್ಲ ಎಂದಿದ್ದರು. ನಾನು ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡಿದ್ದೇನೆ.  ತಮ್ಮ ಕೆಲಸದ ಬಗ್ಗೆ ಪುಟ್ಟರಾಜು ಸ್ವತಃ ಅಭಿನಂದಿಸಿದ್ದವರು ಈಗ ಟೀಕಿಸುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರೆ ನೋವಾಗುತ್ತೆ. ಬೇರೆ ಹೆಣ್ಣುಮಕ್ಕಳ ಕುರಿತು ಮಾತನಾಡಿದರೆ ನೋವಾಗುವುದಿಲ್ಲವೇ ಎಂದು ರಮ್ಯಾ ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ