10ನೇ ತರಗತಿ ಫಲಿತಾಂಶದಲ್ಲಿ ರಾಜ್ಯದ ಒಟ್ಟು 36 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಅಂತೆಯೇ ಪದವಿ ಪೂರ್ವ ಫಲಿತಾಂಶದಲ್ಲಿಯೂ ಕೂಡ ಇಂತಹ ಯಡವಟ್ಟು ಸಂಭವಿಸಿದ್ದು, 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಇವುಗಳ ಪೈಕಿ ಒಂದು ಸರ್ಕಾರಿ ಕಾಲೇಜು ಇದ್ದರೆ, ಮತ್ತೆರಡು ವಿಭಜಿತ ಹಾಗೂ 44 ಖಾಸಗಿ ಕಾಲೇಜುಗಳು ಸೇರಿವೆ.
ಇನ್ನು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ಶಿಕ್ಷಣ ಇಲಾಖೆ ಕ್ರಮ ಫಲಿತಾಂಶಗಳಂತೆಯೇ ಕಳಪೆಯಾಗಿದ್ದು, ಈ ಪರಿಣಾಮ ಕಳೆದ ಹಲವು ವರ್ಷಗಳಿಂದಲೂ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಶೂನ್ಯ ಫಲಿತಾಂಶದ ಹಾದಿ ಹಿಡಿದಿವೆ. ಈಗಾಗಲೇ ಪಿಯುಸಿ ಪ್ರವೇಶ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಮಾನ್ಯತೆ ರದ್ದುಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯೇ ಕಳಪೆ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ. ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಇಂತಹ ಸಂಸ್ಥೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.