ಭೂಗಳ್ಳರ ವಿರುದ್ಧ ಸರ್ಕಾರದ ಕ್ರಮವೇನು: ಕುಮಾರಸ್ವಾಮಿ

ಮಂಗಳವಾರ, 5 ಮೇ 2015 (14:45 IST)
ಸರ್ಕಾರವು ಕೆರೆ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಕಾರಣದಿಂದ ಅಮಾಯಕರನ್ನು ಬೀದಿಗೆ ತಳ್ಳುತ್ತಿದೆ. ಆದರೆ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಲಾಭ ಗಳಿಕೆಗೆ ಮುಂದಾದ ಮೂಲ ಭೂಗಳ್ಳರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮವೇನು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 
 
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಣಸವಾಡಿ, ಕಾಡುಗೋಡಿ ಸೇರಿದಂತೆ ಇತರೆಡೆ ಕೆರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಸರ್ಕಾರ ಕಾರ್ಯಾಚರಣೆ ಕೈಗೊಂಡಿದ್ದು, ಅಮಾಯಕರನ್ನು ಬೀದಿಗೆ ತಳ್ಳಲು ಮುಂದಾಗಿದೆ. ಆದರೆ ಮೂಲತಃ ಬಂಡವಾಳ ಶಾಹಿಗಳೇ ತಮ್ಮ ಪ್ರಾಬಲ್ಯದಿಂದ ಕೆರೆ ಜಾಗವನ್ನು ವಶಪಡಿಸಿಕೊಂಡು ಲಾಭಕ್ಕೋಸ್ಕರ ಅಕ್ರಮವಾಗಿ ವಾಣಿಜ್ಯಿಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿದರು.  
 
ಇನ್ನು ಹೆಚ್ಡಿಕೆ ಪ್ರಶ್ನೆಗೆ ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಪ್ರತಿಕ್ರಿಯಿಸಿದ್ದು, ಕೆರೆ ಒತ್ತುವರಿ ಪರಿಣಾಮ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಲು ಸರ್ಕಾರ ಚಿಂತಿಸುತ್ತಿದೆ. ಆದರೆ ವ್ಯವಹಾರಿಕವಾಗಿ ಲಾಭ ಪಡೆಯಲೆತ್ನಿಸಿ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದೇವೆ. ಇನ್ನು ಲೇಔಟ್‌ಗಳನ್ನು ನಿರ್ಮಿಸಿರುವ ಬಗ್ಗೆಯೂ ಕೂಡ ಚರ್ಚಿಸಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದೇವೆ ಎಂದರು. 
 
ನಗರದ ಹೆಚ್ಆರ್‌ಬಿಆರ್ ಲೇಔಟ್‌ನಲ್ಲಿರುವ ಬಾಣಸವಾಡಿ ಕೆರೆಗೆ ಸಂಬಂಧಿಸಿದ ಸುಮಾರು 711 ಎಕರೆ ಭೂಮಿಯನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾಣದಿಂದ ಸರ್ಕಾರವು ಆ ಜಾಗದ ತೆರವಿಗೆ ಮುಂದಾಗಿದ್ದು, ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಅಲ್ಲದೆ ಈಗಾಗಲೇ ಇಲ್ಲಿನ ಕೆಲವು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದೆ. 

ವೆಬ್ದುನಿಯಾವನ್ನು ಓದಿ