ಎಲ್ಲೇ ಇರು, ಏನೇ ಆಗಿರು, ಗೋಪ್ರೇಮಿ ಆಗಿರು: ಶ್ರೀಶ್ರೀರಾಘವೇಶ್ವರಭಾರತೀ

ಭಾನುವಾರ, 21 ಆಗಸ್ಟ್ 2016 (13:36 IST)
ಅಪೇಕ್ಷೆಯೇ ವ್ಯವಸ್ಥೆಯ ತಾಯಿಯಾಗಿದ್ದು, ನಾವೆಲ್ಲರೂ ಶುದ್ಧವಾದ ಹಾಲನ್ನು ಮಾತ್ರ ಕುಡಿಯುವ ಸಂಕಲ್ಪ ಮಾಡಿ, ಹಾಲಿನ ರೂಪದಲ್ಲಿರುವ ಹಾಲಾಹಲವನ್ನು ತಿರಸ್ಕರಿಸುವ ಸಂಘಟಿತ ಪ್ರಯತ್ನ ಮಾಡಿದರೆ ಖಂಡಿತವಾಗಿ ಗೋ ಆಂದೋಲನವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಇಂದು ನಮ್ಮನ್ನು ವಿಷಾಹಾರದ ಬಲೆಯಲ್ಲಿ ಸಿಲುಕಿಸಲಾಗಿದೆ, ಯಾವುದನ್ನು ಸೇವಿಸ ಬೇಕು ಯಾವುದನ್ನು ಸೇವಿಸಬಾರದು ಎಂಬ ವಿವೇಚನೆ ನಮಗೆ ಬೇಕು. ಶುದ್ಧಹಾಲನ್ನು ಕುಡಿದರೆ ಮಾತ್ರ ಶುದ್ಧವಾದ ಮನಸ್ಸುನಮ್ಮದಾಗುತ್ತದೆ. ಹಾಗಾಗಿ ಶುದ್ಧ ಹಾಲನ್ನು ಮಾತ್ರ ಕುಡಿಯುವ ಸಂಘಟಿತ ಸಂಕಲ್ಪವನ್ನು ಮಾಡೋಣ ಎಂಬ ಕರೆ ನೀಡಿದರು.
 
ಐಟಿ-ಬಿಟಿ ಕ್ಷೇತ್ರದಲ್ಲಿದ್ದರೂ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಪಾಲ್ಸ್ ಗುಂಪಿನ ರಾಮ ಸುಬ್ರಹ್ಮಣ್ಯಂ, ವ್ಯವಸ್ಥೆಯ ವಿರುದ್ದ ಹೋರಾಟಮಾಡಿ ಕಸಾಯೀಖಾನೆ ಆರಂಭವಾಗದಂತೆ ತಡೆದ ಎಂ ಎನ್ ರೆಡ್ಡಿ ಹಾಗೂ ಉನ್ನತ ಹುದ್ದೆಯಲ್ಲಿದ್ದರೂ ಸ್ವತಃ ಗೋಶಾಲೆ ನಡೆಸುತ್ತಿರುವ ಅಮರನಾಥ್ ಕೆ ಎನ್ ಅವರುಗಳಿಗೆ ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದ ಶ್ರೀಗಳು, ‘ಎಲ್ಲೇ ಇರು, ಏನೇ ಆಗಿರು, ಗೋಪ್ರೇಮಿ ಆಗಿರು’ ಎಂಬ ಸಂದೇಶವನ್ನು ನೀಡಿದರು.
 
 
ಚಿಕ್ಕನಾಯಕನಹಳ್ಳಿಯ ಕುಪ್ಪೂರು ಮಠದ ಷ| ಬ್ರ| ಡಾ|| ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂತಸಂದೇಶ ನೀಡಿ, ಭೂಮಾತೆಗಿಂತ ಗೋಮಾತೆ ಒಂದು ತೂಕ ಹೆಚ್ಚು, ಜೀವನವಿಡೀ ಹಾಲುಣಿಸುವ ಆಕೆಯ ಋಣ ತೀರಿಸಲಾಗದು ಎಂದ ಅವರು, ಪೂಜ್ಯ ರಾಘವೇಶ್ವರ ಶ್ರೀಗಳು ಶಂಕರಾಚಾರ್ಯ ಸ್ಥಾಪಿತ ಅವಿಚ್ಚಿನ್ನ ಪರಂಪರೆಯ ಪೀಠಾಧೀಶ್ವರರಾಗಿದ್ದರೂ  ಸಂತರೆಲ್ಲರೂ ಒಂದೇ ಎನ್ನುವ ಅವರ ಕಾರುಣ್ಯ ಅನುಪಮವಾದದ್ದು, ಶ್ರೀಗಳ ಗೋಆಂದೋಲನಕ್ಕೆ ನಮ್ಮ ಪೂರ್ಣ ಸಹಕಾರವಿದೆ ಎಂದರು.
 
ಐಟಿ-ಬಿಟಿ ಕ್ಷೇತ್ರದಲ್ಲಿದ್ದರೂ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಪಾಲ್ಸ್ ಗುಂಪಿನ ರಾಮ ಸುಬ್ರಹ್ಮಣ್ಯಂ, ವ್ಯವಸ್ಥೆಯ ವಿರುದ್ದ ಹೋರಾಟಮಾಡಿ ಕಸಾಯೀಖಾನೆ ಆರಂಭವಾಗದಂತೆ ತಡೆದ ಎಂ ಎನ್ ರೆಡ್ಡಿ ಹಾಗೂ ಉನ್ನತ ಹುದ್ದೆಯಲ್ಲಿದ್ದರೂ ಸ್ವತಃ ಗೋಶಾಲೆ ನಡೆಸುತ್ತಿರುವ ಅಮರನಾಥ್ ಕೆ ಎನ್ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. 
 
ಕಾರ್ಕಳದ ಆದರ್ಶ ಗೋಖಲೆ ಅವರು ಗೋ ಹೋರಾಟದ ಇತಿಹಾಸದ ಕುರಿತು ಗೋಸಂದೇಶ ನೀಡಿದರು. ಶ್ರೀಭಾರತೀಪ್ರಕಾಶನವು ಹೊರತಂದ ಗೋಕಥಾ - ದೃಶ್ಯಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಯತೀಶ್ವರ ಶಿವಾಚಾರ್ಯರು ಲೋಕಾರ್ಪಣೆ ಮಾಡಿದರು. ಗೋಪಾಲ್ಸ್ ತಂಡ ಹಾಗೂ ಅನೇಕ ಮಕ್ಕಳು, ಮಾತೆಯರು ‘ಗೋಬಂಧು’ವಾಗಿ ಗೋವನ್ನು ದತ್ತುಪಡೆದು ಶ್ರೀಗಳಿಂದ ಆಶೀರ್ವಾದ ಪಡೆದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಸಮುದ್ಯತಾ ಮತ್ತು ಸಮನ್ವಿತಾ ಸಂಗಡಿಗರಿಂದ ಪುಣ್ಯಕೋಟಿ ಭರತನಾಟ್ಯ ಕಾರ್ಯಕ್ರಮ ಕಲಾಭಿಮಾನಿಗಳ ಮನರಂಜಿಸಿತು.
 
ಬೆಂಗಳೂರು ಮಂಡಲಾಂತರ್ಗತ  ಸರ್ವಜ್ಞ ಹಾಗೂ ಸರ್ವಧಾರಿ ವಲಯದವರಿಂದ ಸರ್ವಸೇವೆ ನೆರವೆರಿತು. ಗೋಪಾಲ್ಸ್ ತಂಡ ಸದಸ್ಯರು, ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಸುವರ್ಣಿನೀ ರಾವ್ ಕೊಣಲೆ ಹಾಗೂ ಕೃಷ್ಣಾನಂದ ಶರ್ಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು. 
 
ಕೋಟ್ಸ್
ಯಾವುದನ್ನು ಸೇವಿಸಬೇಕು ಯಾವುದನ್ನು ಸೇವಿಸಬಾರದು ಎಂಬ ವಿವೇಚನೆ ನಮಗೆ ಬೇಕು. ಶುದ್ಧಹಾಲನ್ನು ಕುಡಿದರೆ ಮಾತ್ರ ಶುದ್ಧವಾದ ಮನಸ್ಸುನಮ್ಮದಾಗುತ್ತದೆ.
         - ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
 
ಪೂಜ್ಯ ರಾಘವೇಶ್ವರ ಶ್ರೀಗಳು ಶಂಕರಾಚಾರ್ಯ ಸ್ಥಾಪಿತ ಅವಿಚ್ಚಿನ್ನ ಪರಂಪರೆಯ ಪೀಠಾಧೀಶ್ವರರಾಗಿದ್ದರೂ  ಸಂತರೆಲ್ಲರೂ ಒಂದೇ ಎನ್ನುವ ಅವರ ಕಾರುಣ್ಯ ಅನುಪಮವಾದದ್ದು, ಶ್ರೀಗಳ ಗೋಆಂದೋಲನಕ್ಕೆ ನಮ್ಮ ಪೂರ್ಣ ಸಹಕಾರವಿದೆ. 
                    - ಕುಪ್ಪೂರು ಮಠದ ಷ| ಬ್ರ| ಡಾ|| ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
 
ಹೋರಾಟಮಾಡಿ ಕಸಾಯೀಖಾನೆ ಆರಂಭವಾಗದಂತೆ ತಡೆದ ಎಂ.ಎನ್.ರೆಡ್ಡಿ ಇವರಿಗೆ ಗೋಸೇವಾಪುರಸ್ಕಾರ ಪ್ರದಾನ.
ಶ್ರೀಭಾರತೀಪ್ರಕಾಶನದ ಗೋಕಥಾ – ದೃಶ್ಯಮುದ್ರಿಕೆ ಲೋಕಾರ್ಪಣೆ.
ಗೋಪಾಲ್ಸ್ ತಂಡ ಹಾಗೂ ಅನೇಕ ಮಕ್ಕಳು, ಮಾತೆಯರು ‘ಗೋಬಂಧು’ವಾಗಿ ಗೋವನ್ನು ದತ್ತುಪಡೆದರು.
 
ಇಂದಿನ ಕಾರ್ಯಕ್ರಮ (21.08.2016):
 
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
  ಲೋಕಾರ್ಪಣೆ : ನಡೆಯಲೊಂದು ದಿನ - ಪುಸ್ತಕ : ಲೇಖಕ - ರವೀಂದ್ರ ಭಟ್ ಸೂರಿ ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
 
ಅಪರಾಹ್ನ 3.00 :  ಗೋಕಥಾ 
ವಿಶಿಷ್ಟ ನಿರೂಪಣೆಯ ಗೋಕಥಾ: ಗೋವಿನ ಕುರಿತಾದ ಕಥಾ ನಿರೂಪಣೆ, ಗಾಯನ, ಚಿತ್ರರಚನೆಗಳನ್ನೋಳಗೊಂಡ ವೈಶಿಷ್ಟ್ಯಪೂರ್ಣವಾದ 'ಗೋಕಥಾ' ಸಂಪನ್ನವಾಗಲಿದ್ದು, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಗೋಕಥೆ ನಿರೂಪಣೆಯನ್ನು ಮಾಡಲಿದ್ದಾರೆ.
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ