ಐದು ತಿಂಗಳಲ್ಲಿ ಕೋಟಿ ಕೋಟಿ ಆದಾಯ ಹೇಗೆ ಬಂತು ಡಿವಿಎಸ್ ಸಾಹೇಬ್ರೆ: ಸಿದ್ದು

ಭಾನುವಾರ, 26 ಅಕ್ಟೋಬರ್ 2014 (10:54 IST)
ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಆಸ್ತಿ 5 ತಿಂಗಳಲ್ಲಿ ದುಪ್ಪಟ್ಟು ಹೇಗಾಯ್ತು ಎಂಬ ಬಗ್ಗೆ ಅವರೇ ಮಾಹಿತಿ ನೀಡಬೇಕು. ತಮ್ಮ ಆಸ್ತಿ 5 ತಿಂಗಳ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ? ದುಪ್ಪಟ್ಟು ಆಗಿದ್ದರೆ ಅದು ಹೇಗಾಯ್ತು? ಎಂಬುದಕ್ಕೆ ಸದಾನಂದಗೌಡರು ಜನರಿಗೆ ವಿವರಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 
 
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ಲೋಕಸಭೆ ಚುನಾವಣೆಗೆ ನಾಮಪತ್ರದ ಸಲ್ಲಿಸಿದ ಬಳಿಕ ವ್ಯವಹಾರವೊಂದಕ್ಕೆ ಫೆಡರಲ್‌ ಬ್ಯಾಂಕ್‌ನಿಂದ ಸಾಲ ಪಡೆದಿದ್ದೆ. ಅದರಿಂದಾಗಿ ನನ್ನ ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
 
ನಗರ ರೈಲ್ವೆ ನಿಲ್ದಾಣದಲ್ಲಿ  ಧಾರ್ಮಿಕ ಕ್ಷೇತ್ರಗಳ ವಿಶೇಷ ಪ್ರವಾಸಿ ರೈಲು 'ಸುಖಮಂಗಳಂ ಯಾತ್ರಾ'ಗೆ ಹಸಿರು ನಿಶಾನೆ ತೋರಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 
 
ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ವ್ಯವಹಾರಕ್ಕಾಗಿ ಫೆಡರಲ್‌ ಬ್ಯಾಂಕ್‌ನಲ್ಲಿ 8.5 ಕೋಟಿ ರೂ. ಸಾಲ ಕೋರಿದ್ದೆ. ಮೊದಲ ಕಂತಿನಲ್ಲಿ ಬ್ಯಾಂಕ್‌ 2 ಕೋಟಿ ರೂ. ಬಿಡುಗಡೆ ಮಾಡಿತು. ಆ ವ್ಯವಹಾರದಿಂದ ಆದಾಯ ಬಂತು. ಹಾಗಾಗಿ, ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ. ಆ ನನ್ನ ವ್ಯವಹಾರ ಪಾರದರ್ಶಕವಾಗಿದೆ ಎಂದು ಸ್ಪಷ್ಟನೆ ನೀಡಿದರು. 
 
ಬೆಂಗಳೂರಿನಲ್ಲಿ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ 'ಸುಖಮಂಗಳಂ ಯಾತ್ರಾ' ವಿಶೇಷ ಪ್ರವಾಸಿಗರ ರೈಲಿಗೆ ಶನಿವಾರ ಚಾಲನೆ ನೀಡಿದರು. ಕೇಂದ್ರ ಸಚಿವ ಅನಂತಕುಮಾರ್‌, ಸಚಿವ ದಿನೇಶ್‌ ಗುಂಡೂರಾವ್‌, ಸಂಸದರಾದ ಪಿ.ಸಿ.ಮೋಹನ್‌ ಹಾಗೂ ಹರಿಪ್ರಸಾದ್‌ ಇದ್ದರು. 
 

ವೆಬ್ದುನಿಯಾವನ್ನು ಓದಿ