ಚಿನ್ನಕ್ಕಾಗಿ ಮಹಿಳೆ ಹತ್ಯೆ: ಮೊಹಂತಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗೆ ಜೀವಾವಧಿ ಶಿಕ್ಷೆ

ಗುರುವಾರ, 18 ಡಿಸೆಂಬರ್ 2014 (17:10 IST)
ಚಿನ್ನದ ಆಸೆಗಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯೋರ್ವಳನ್ನು ಹತ್ಯೆಗೈದಿದ್ದ ಆರೋಪದ ಮೇರೆಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. 
 
ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಮೂಡಿಗೆರೆಯಲ್ಲಿನ ಮೊಹಂತಿ ಮಠದ ಪೀಠಾಧ್ಯಕ್ಷ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮೊಹಮ್ಮದ್ ಅಸೂಫ್, ಫಾರುಕ್ ಹಾಗೂ ಲತೀಫ್ ಎನ್ನಲಾಗಿದ್ದು, ಈ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಲ್ಲಿಡಲಾಗಿತ್ತಾದರೂ ಇಂದು ತೀರ್ಪಿನ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
 
ಇನ್ನು ನಾಲ್ಕನೇ ಆರೋಪಿ ಲತೀಫ್, ಬಾಡಿಗೆ ಕಾರು ಚಾಲಕನಾಗಿದ್ದು ತಲೆ ಮರೆಸಿಕೊಂಡಿದ್ದಾನೆ. ಹಾಗಾಗಿ ಇಂದಿಗೂ ಬಂಧನ ಸಾಧ್ಯವಾಗಿಲ್ಲ. ಈ ಆರೋಪಿಗಳು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಾವತಿ ಎಂಬುವವರನ್ನು ಚಿನ್ನಕ್ಕಾಗಿ ಹತ್ಯೆಗೈದಿದ್ದ ಆರೋಪವನ್ನು ಎದುರಿಸುತ್ತಿದ್ದರು. ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ 302,201ರ ಪ್ರಕಾರ ಶಿಕ್ಷೆ ವಿಧಿಸಲಾಗಿದೆ.  
 
ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಆರೋಪಿಗಳ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಇದು ಅತಿ ಘೋರ ಕೃತ್ಯವಾಗಿರುವ ಹಿನ್ನೆಲೆಯಲ್ಲಿ ಈ ಘೋರ ಶಿಕ್ಷೆ ನೀಡಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದು, ತಲಾ 25 ಸಾವಿರ ರೂ ದಂಡ ವಿಧಿಸಿದೆ. ಈ ದಂಡ ರೂಪದ ಹಣವನ್ನು ಮೈತೆಯ ಮಗನಿಗೆ ಕೊಡಬೇಕು. ಅಲ್ಲದೆ ಪ್ರಕರಣ ಭೇಧಿಸುವಲ್ಲಿ ಪೊಲೀಸರ ಕಾರ್ಯದಕ್ಷತೆ ಮುಖ್ಯವಾಗಿದ್ದು, ಅವರಿಗೂ ಕೂಡ 10 ಸಾವಿರ ರೂ ನೀಡುವಂತೆ ಆದೇಶಿಸಿದೆ. ಒಂದು ವೇಳೆ ಹಣ ನೀಡಲು ಅಸಹಾಯಕರಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. 
 
ಚಂದ್ರಾವತಿಯನ್ನು 2008 ಡಿ.11ರಂದು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳನ್ನು ಭೇಧಿಸುವಲ್ಲಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.  

ವೆಬ್ದುನಿಯಾವನ್ನು ಓದಿ