ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಚಿಕ್ಕಬಳ್ಳಾಪುರದಿಂದ ದೆಹಲಿಗೆ ಬಂದ ಬಡ ಮಹಿಳೆ!

ಮಂಗಳವಾರ, 30 ಮೇ 2017 (10:50 IST)
ನವದೆಹಲಿ: ‘ಬೆಂಗಳೂರಿಗೆ ಬಂದು ಸಿಎಂ ಸಾಹೇಬ್ರನ್ನು ಭೇಟಿ ಮಾಡಿ ಸಮಸ್ಯೆ ಹೇಳೋಣ ಅಂದ್ರೆ ಅವರು ಯಾವತ್ತೂ ಬ್ಯುಸಿ. ಅವರು ದೆಹಲಿಗೆ ಹೋಗ್ತಾರೆ ಅಂತ ಗೊತ್ತಾಯ್ತು. ಅದಕ್ಕೇ ಇಲ್ಲಿಗೆ ಬಂದೇ..’

 
ಹಾಗಂತ ಚಿಕ್ಕಬಳ್ಳಾಪುರದ ಬಡ ಮಹಿಳೆಯೊಬ್ಬರು ಸಿಎಂ ಭೇಟಿಗಾಗಿ ದೆಹಲಿಗೆ ಹೋಗುವ ಸಾಹಸ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಮುನಿಯಮ್ಮ ಎಂಬಾಕೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾವಿರಾರು ಕಿ.ಮೀ. ಪ್ರಯಾಣ ಮಾಡಿದ ಕತೆ ಇದು.

ಮುನಿಯಮ್ಮನಿಗೆ ತನ್ನ ಹಿರಿಯರಿಂದ ಬಂದ ಎರಡು ಎಕರೆ ಜಮೀನಿದೆ. ಇದನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಜಮೀನು ಕಳೆದುಕೊಂಡ ಆಕೆಯ ಬದುಕು ಅತಂತ್ರವಾಗಿದೆ. ತನ್ನನ್ನು ನೋಡಲು ಕರ್ನಾಟಕದಿಂದ ದೆಹಲಿಗೆ ಬಂದ ಮಹಿಳೆಯ ಕತೆ ಕೇಳಿ ಸಿಎಂ ಮನಕಲಕಿತು.

ಹೀಗಾಗಿ ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದರು. ನಂತರ ಆಕೆಗೆ ಹೊಟ್ಟೆ ತುಂಬಾ ಊಟ ನೀಡಿದರಲ್ಲದೆ, ಮರಳಿ ಮನೆಗೆ ಹೋಗಲು ಹಣವಿಲ್ಲವೆಂದಿದ್ದಕ್ಕೆ 2000 ರೂ. ಕೊಟ್ಟು ಕಳುಹಿಸಿದರು.

ವಿಶೇಷವೆಂದರೆ ಮುನಿಯಮ್ಮ ದೆಹಲಿಗೆ ಹೋಗಿದ್ದು, ಆಕೆಯ ಪುತ್ರನಿಗೇ ಗೊತ್ತಿರಲಿಲ್ಲವಂತೆ. ಜಮೀನು ಸಮಸ್ಯೆ ಪರಿಹರಿಸಲೆಂದು ಬೆಂಗಳೂರಿಗೆ ಹೋಗುತ್ತೇನೆಂದು ಆಕೆ ದೆಹಲಿಗೆ ಹೇಗೆ ಹೋದಳೋ ಎಂದು ಪುತ್ರ ನಂಜಪ್ಪ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ