ನಾನೇ ಖುದ್ದಾಗಿ ಎಲ್ಲರಿಗೂ ಪತ್ರ ಬರೆದಿದ್ದೆ: ದೇವೇಗೌಡ

ಶನಿವಾರ, 24 ಜನವರಿ 2015 (12:51 IST)
ಜೆಡಿಎಸ್ ಪಕ್ಷದ ವತಿಯಿಂದ ಪಕ್ಷದ ಕಾರ್ಯಕರ್ತರ ಪುನಶ್ಚೇತನಕ್ಕಾಗಿ ಇಲ್ಲಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಸಮಾರಂಭದಲ್ಲಿ ಪಕ್ಷದ ವರಿಷ್ಠ ದೇವೇಗೌಡ ಮಾತನಾಡಿದರು. ನಾನೇ ಖುದ್ದು, ಪಕ್ಷದ ಎಲ್ಲಾ ನಾಯಕರಿಗೆ ಪತ್ರ ಬರೆದಿದ್ದೆ. ಆದರೆ ನಾನಾ ಕಾರಣಗಳಿಂದ ತಲುಪಿಲ್ಲದಿರಬಹುದು. ಆದರೆ ತಲುಪದ ಕಾರಣವನ್ನಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬುದು ಸುಳ್ಳು ಎಂದರು. 
 
ಸಮಾವೇಶದಲ್ಲಿ ಪಕ್ಷದ ಸದಸ್ಯರ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೌಡರು, ಸಮಾವೇಶದಲ್ಲಿ ಅಳವಡಿಸಿರುವ ಕೆಲವು ಜಾಹೀರಾತು ಫಲಕಗಳಲ್ಲಿ ಕೆಲ ನಾಯಕರ ಫೋಟೋ ಇಲ್ಲದಿರುವುದು ಈಗ ಕಂಡು ಬರುತ್ತಿದೆ. ಆದರೆ ಇದು ನನ್ನ ತಪ್ಪಲ್ಲ. ಎಲ್ಲರ ಫೋಟೋಗಳನ್ನೂ ಕೂಡ ಅಳವಡಿಸುವಂತೆ ಕಾರ್ಯಕ್ರಮ ಆಯೋಜಕರಿಗೆ ಸೂಚಿಸಲಾಗಿತ್ತು. ಆದರೂ ಇದು ಕೆಲ ಸಣ್ಣ ಪುಟ್ಟ ಕಾರಣಗಳಿಂದ ತಪ್ಪಾಗಿರಬಹುದು. ಈ ಹಿನ್ನೆಲೆಯಲ್ಲಿ ಯಾವ ನಾಯಕರೂ ಕೂಡ ಬೇಧಭಾವ ಮಾಡಲಾಗುತ್ತಿದೆ ಎಂದು ತಿಳಿಯಬೇಡಿ ಎಂದು ನಾಯಕರಲ್ಲಿ ಮನವಿ ಮಾಡಿಕೊಂಡರು. 
 
ಬಳಿಕ ಮಾತನಾಡಿದ ಅವರು, ನಾನೇ ಖುದ್ದು ಪಕ್ಷದ ಎಲ್ಲಾ ನಾಯಕರಿಗೂ ಪತ್ರ ಬರೆದಿದ್ದೇನೆ. ಆದರೆ ಕೆಲ ಕಾರಣಗಳಿಂದ ಪತ್ರ ತಲುಪಿಲ್ಲದಿರಬಹುದು. ಆ ಕಾರಣವನ್ನೇ ಇಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬುದು ಸುಳ್ಳು ಎಂದು ಶಾಸಕ ಜಮೀರ್ ಅಹ್ಮದ್ ಅವರ ಹೇಳಿಕೆ ತಿರುಗೇಟು ನೀಡಿದರು.  
 
ಸಮಾವೇಶಕ್ಕೆ ಗೈರು ಹಾಜರಾಗಿದ್ದ ಶಾಸಕ ಜಮೀರ್ ಅಹ್ಮದ್, ನನಗೆ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರಿಂದಾಗಲಿ, ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರಿಂದಾಗಲಿ ಅಥವಾ ಪಕ್ಷದ ಪ್ರಾದೇಶಿಕ ಕಚೇರಿಯಿಂದಾಗಲಿ ಯಾವುದೇ ರೀತಿಯ ಅಧಿಕೃತ ಆಹ್ವಾನ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾನು ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ. ಅತ್ತ ಕಡೆ ತಲೆ ಹಾಕುವ ಜಾಯಮಾನವೇ ನಂದಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಗೌಡರು ಹೀಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ