ಐಐಟಿ ಹುಬ್ಬಳ್ಳಿಗೆ: ರಾಯಚೂರಿನಲ್ಲಿ ಯಡಿಯೂರಪ್ಪ ಅವರಿಗೆ ಪ್ರತಿಭಟನೆ ಬಿಸಿ

ಶುಕ್ರವಾರ, 2 ಅಕ್ಟೋಬರ್ 2015 (15:47 IST)
ಐಐಟಿ ಕೇಂದ್ರವನ್ನು ರಾಯಚೂರಿಗೆ ನೀಡುವ ಬದಲು ಹುಬ್ಬಳ್ಳಿಗೆ ನೀಡಲಾಗಿದ್ದು, ಈ ಮೂಲಕ ಜಿಲ್ಲೆಗೆ ವಂಚಿಸಲಾಗಿದೆ ಎಂದು ಕುಪಿತಗೊಂಡ ಜಿಲ್ಲೆಯ ಸಾರ್ವಜನಿಕರು ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ ಅವರ ಕಾರಿಗೆ ಇಂದು ಮುತ್ತಿಗೆ ಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.   
 
ಜಿಲ್ಲೆಯ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಇದೇ ತಾಲೂಕಿನ ಜವಳಗೆರೆ ಗ್ರಾಮದ ಗ್ರಾಮಸ್ಥರು ಯಡಿಯೂರಪ್ಪ ಅವರ ಕಾರನ್ನು  ತಡೆಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದಾದ ಬಳಿಕ ಮಾನ್ವಿ ಪಟ್ಟಣಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಇಲ್ಲಿಯೂ ಕೂಡ ಬಿಡಲಿಲ್ಲ. ಇಲ್ಲಿನ ಎಪಿಎಂಸಿ ಬಳಿಗೆ ಬರುತ್ತಿದ್ದಂತೆ ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದರು. ಇದರಿಂದ ಸುಮಾರು ಮೂರು ಕಿ.ಮೀ ವರೆಗೆ ಟ್ರಾಫಿಕ್ ಜಾಂ ಉಂಟಾದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು. 
 
ರಾಜ್ಯ ಬಿಜೆಪಿ ಘಟಕವು ನಿನ್ನೆಯಿಂದ ಎರಡನೇ ಹಂತದ ರೈತರ ಚೈತನ್ಯ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಬಳ್ಳಾರಿ ನಗರದಿಂದ ಆರಂಭವಾಗಿದೆ. ಮುಂದುವರಿದು ರಾಯಚೂರು ತಲುಪಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ನಗರದತ್ತ ಆಗಮಿಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರು ಅವರನ್ನು ತಡೆಗಟ್ಟಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ