ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಟೀಂ ರಣತಂತ್ರ

ಭಾನುವಾರ, 18 ಮೇ 2014 (11:49 IST)
ರಾಜ್ಯಕ್ಕೆಷ್ಟು ಸಚಿವ ಸ್ಥಾನ ಎಂಬ ಚರ್ಚೆಯ ನಡುವೆಯೇ ಲಾಬಿ ಮಾಡಿದರೆ ಸಿಗುವ ಸ್ಥಾನವೂ ತಪ್ಪಿಹೋಗಬಹುದೋ ಎಂಬ ಅಳುಕು ರಾಜ್ಯದ ಸಂಸದರನ್ನು ಕಾಡುತ್ತಿದೆ.
 
ರಾಜ್ಯದಲ್ಲಿ ಸಾಕಷ್ಟು ಹಿರಿಯರು, ನಾಯಕರು ಆಯ್ಕೆಯಾಗಿದ್ದಾರೆ. ಮಂತ್ರಿಯಾಗುವಾಸೆ ಎಲ್ಲರಲ್ಲೂ ಇದೆ. ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಭರ್ಜರಿ ಗೆಲುವಿನ ಹುರುಪಿನೊಂದಿಗೆ ಶನಿವಾರವೇ ದೆಹಲಿಗೆ ಪ್ರಯಾಣ ಬೆಳೆಸಿ, ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್‌ರನ್ನು ಭೇಟಿ ಮಾಡಿದ್ದಾರೆ. ಸಚಿವರಾಗುವಾಸೆ ಸಾಕಷ್ಟು ಜನರಿಗಿದ್ದರೂ ಯಾರೂ ಆ ಬಗ್ಗೆ ಬಾಯ್ಬಿಡುತ್ತಿಲ್ಲ. ಕಾರಣ ಮೋದಿ!
 
ಇತರ ಸಂದರ್ಭವಾಗಿದ್ದರೆ ಇಷ್ಟೊತ್ತಿಗೆ ಲಾಬಿ ಮುಗಿಲುಮುಟ್ಟುತ್ತಿತ್ತು. ಆದರೆ ಮೋದಿ ಅಲೆಯಿಂದ ದೊರೆತ ಭರ್ಜರಿ ಬಹುಮತ ಸಂಸದರ ಬಾಯಿಕಟ್ಟಿಹಾಕಿದೆ. ಅದಿಲ್ಲದಿದ್ದರೆ ಬಿಜೆಪಿಗೆ ಇಷ್ಟು ಸೀಟು ಸಿಗಲು ಸಾಧ್ಯವೇ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಮುಳುಗುತ್ತಿದ್ದ ರಾಜ್ಯದ ಸಾಕಷ್ಟು ಸಂಸದರನ್ನು ಈ ಬಾರಿ ತೇಲಿಸಿದ್ದು ಮೋದಿ ಅಲೆ ಎಂಬುದು ಕೂಡ ಅಷ್ಟೇ ಸತ್ಯ. ಇದರ ಅರಿವು ಆ ಸಂಸದರಿಗೂ ಇದೆ.
 
ಜತೆಗೆ ಕೇಂದ್ರದಲ್ಲಿ ಮಿತ್ರ ಪಕ್ಷಗಳೂ ಸೇರಿ ಅಲ್ಲಾಡಿಸಲಾಗದಷ್ಟು ಭರ್ಜರಿ ಬಹುಮತ ಬಿಜೆಪಿಗೆ ಲಭಿಸಿಬಿಟ್ಟಿದೆ. ಇದು ಕೇವಲ ಮೋದಿಯಿಂದ ಸಾಧ್ಯವಾಗಿದ್ದರಿಂದ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಯಾರಿಗೆ ಯಾವ ಖಾತೆ ನೀಡಬೇಕು ಎಂಬ ವಿಷಯದಲ್ಲಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗುತ್ತಿದೆ. ಮೋದಿ ಅವರು ಲಾಬಿ, ಅನುಭವಕ್ಕಿಂತ ಸಾಮರ್ಥ್ಯಕ್ಕೆ ಹೆಚ್ಚು ಬೆಲೆಕೊಡುವುವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಬಿಜೆಪಿಯ ಸಚಿವಸ್ಥಾನಾಕಾಂಕ್ಷಿ ಸಂಸದರ ನೆಮ್ಮದಿ ಕೆಡಿಸಿದೆ.
 
ಜತೆಗೆ ಕೇಂದ್ರದಲ್ಲಿ ಅಧಿಕಾರಕ್ಕೇರುವ ಸರ್ಕಾರದ ಮೇಲೆ ಜನ ಭಾರೀ ನಿರೀಕ್ಷೆ ಇರಿಸಿದ್ದಾರೆ ಎಂಬ ಅರಿವೂ ಬಿಜೆಪಿ ಮತ್ತು ಮೋದಿಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆದ ತಪ್ಪು ಯಾವುದೇ ಕಾರಣಕ್ಕೂ ಮರುಕಳಿಸಬಾರದು ಎಂಬ ಕಳಕಳಿಯನ್ನು ಆರೆಸ್ಸೆಸ್ ಹೊಂದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆರೆಸ್ಸೆಸ್ ಸಲಹೆಯನ್ನು ಮೋದಿ ಗಂಭೀರವಾಗಿ ಪರಿಗಣಿಸಲಿದ್ದಾರೆ.
 
ಬಿಜೆಪಿ ನಾಯಕರೊಬ್ಬರ ಪ್ರಕಾರ ಮೋದಿ ಅಧಿಕಾರಕ್ಕೆ ಬಂದರೆ ಕೇವಲ 5 ವರ್ಷವನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುವುದಿಲ್ಲ. ಮುಂದಿನ 10-15 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆದ್ದರಿಂದ ಅನುಭವ, ಹೆಚ್ಚು ಬಾರಿ ಆಯ್ಕೆಯಾದವರು, ಭಾರೀ ಪ್ರಭಾವಿ ನಾಯಕರು ಮುಂತಾದ ಅಂಶಗಳನ್ನಷ್ಟೇ ಅವರು ಸಚಿವ ಸ್ಥಾನ ನೀಡಲು ಪರಿಗಣಿಸುವುದಿಲ್ಲ. ಕೆಲಸ ಮಾಡುವ ಸಾಮರ್ಥ್ಯ, ಪ್ರಾಮಾಣಿಕತೆ, ವಿವಾದ ರಹಿತ ವ್ಯಕ್ತಿತ್ವ, ಚಾಕಚಕ್ಯತೆ ಮುಂತಾದವುಗಳನ್ನು ಅವರು ಪರಿಗಣಿಸುತ್ತಾರೆ. ಇದರ ಜತೆಗೆ ಆರೆಸ್ಸೆಸ್ ಗ್ರೀನ್ ಸಿಗ್ನಲ್ ಕೂಡ ಬೇಕಾಗುತ್ತದೆ.
 
ಇದನ್ನೆಲ್ಲ ಗಮನಿಸಿದರೆ ಈ ಬಾರಿ ಲಾಬಿ ಮಾಡಿದರೆ ಕೇಂದ್ರದ ಸಚಿವ ಸಂಪುಟದಲ್ಲಿ ಜಾಗ ಸಿಗುತ್ತದೆ ಎಂಬ ಖಾತ್ರಿಯಿಲ್ಲ. ಇದನ್ನು ಮನಗಂಡೇ ರಾಜ್ಯದ ಹಿರಿಯ ಸಂಸದರು ಕೂಡ 'ಪಕ್ಷ ಕೊಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ' ಎಂದಷ್ಟೇ ಹೇಳುತ್ತಿದ್ದಾರೆ ಹೊರತು, ಈ ಬಗ್ಗೆ ಬೇರೇನೂ ಹೇಳುತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಅವರಂತೂ 'ಮೋದಿ ಸರ್ಕಾರದಲ್ಲಿ ಸಂಸದನಾಗಿರುವುದೇ ದೊಡ್ಡ ಭಾಗ್ಯ' ಎಂದು ಹೇಳಿಬಿಟ್ಟಿದ್ದಾರೆ. ಬಿಜೆಪಿಗೆ ಪಕ್ಷವೊಂದಕ್ಕೇ ಬಹುಮತ ಲಭಿಸಿರುವುದು ಮತ್ತು ಇಡೀ ಚುನಾವಣೆಯನ್ನು ಮೋದಿಯೊಬ್ಬರೇ ಗೆದ್ದುಕೊಟ್ಟಿರುವುದರಿಂದ ಮತ್ತು ಅವರು ಲಾಬಿಗಳಿಗೆ ಮಣಿಯುವ ರಾಜಕಾರಣಿಯಲ್ಲದ್ದರಿಂದ ಅಧಿಕಾರಾಕಾಂಕ್ಷಿ ಸಂಸದರ ಎಗರಾಟ ಕಡಿಮೆಯಿದೆ. ಲಾಬಿ ಮಾಡಿದರೆ ಎಲ್ಲಿ ಸಿಗುವ ಸ್ಥಾನವೂ ಕೈತಪ್ಪಬಹುದು ಎಂಬ ಆತಂಕ ಸಂಸದರನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ