ಯಾತ್ರೆ ಹೆಸರಿನಲ್ಲಿ ಬುಡೆ ಬಿಡುವುದು ಬಿಟ್ಟು ಪ್ರಧಾನಿ ಬಳಿ ತೆರಳಿ: ಬಿಜೆಪಿಯವರಿಗೆ ಹೆಚ್‌ಡಿಕೆ ಟಾಂಗ್

ಸೋಮವಾರ, 5 ಅಕ್ಟೋಬರ್ 2015 (18:36 IST)
ರಾಜ್ಯ ಬಿಜೆಪಿ ಘಟಕದ ನಾಯಕರು ಹಮ್ಮಿಕೊಳ್ಳುತ್ತಿರುವ ರೈತ ಚೈತನ್ಯ ಯಾತ್ರೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪ್ರತಿಕ್ರಿಯಿಸಿದ್ದು, ಬಿಜೆಪಿಯ 17 ಮಂದಿ ಸಂಸದರು ಯಾತ್ರೆ ಎಂದು ಹೇಳಿಕೊಂಡು ವೇದಿಕೆಯ ಮೇಲೆ ಬುರುಡೆ ಬಿಡುವುದನ್ನು ಬಿಟ್ಟು ಪ್ರಧಾನಿಯನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಮನವೊಲಿಸಿದಲ್ಲಿ ಉತ್ತಮ ಎಂದು ತೀಕ್ಷ್ಣವಾಗಿ ಬಿಜೆಪಿ ನಾಯಕರ ಕಿವಿ ಚುಚ್ಚಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಕೇವಲ ರೈತ ಚೈತನ್ಯ ಯಾತ್ರೆ ಎಂದು ಹೇಳಿಕೊಂಡು ವೇದಿಕೆ ಏರಿ ಬುರುಡೆ ಬಿಡುತ್ತಿದ್ದಾರೆ. ರೈತರ ಬಗ್ಗೆ ಅಷ್ಟೊಂದು ಕಾಳಜಿ ಇದೆ ಎಂದಾದಲ್ಲಿ ರೈತರ ಪರವಾಗಿ ಕೇಂದ್ರ ಸರ್ಕಾರದ ಮನವೊಲಿಸಿ ಅನುದಾನ ಬಿಡುಗಡೆ ಮಾಡುವಲ್ಲಿ ಯತ್ನಿಸಲಿ. ಏಕೆಂದರೆ ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತವೇ ಇದ್ದು, ಅದು ಸಫಲವಾಗಲಿದೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳೇ ಹೆಚ್ಚು ಸಾಲ ನೀಡಿವೆ ಎಂದಾದಲ್ಲಿ ರೈತರ ಬಗ್ಗೆ ಕೇಂದ್ರವೇ ಕಾಳಜಿ ವಹಿಸಬೇಕಾಗುತ್ತದೆ. ಆದ ಕಾರಣ ರಾಜ್ಯದ ಎಲ್ಲಾ ಸಂಸದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವೊಲಿಸಲಿ ಎಂದು ತೀಕ್ಷ್ಣವಾಗಿ ನುಡಿದರು. 
 
ಇನ್ನು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ರೈತ ಚೈತನ್ಯ ಯಾತ್ರೆ ಎಂದು ಹಮ್ಮಿಕೊಳ್ಳುತ್ತಿದ್ದು, ಪ್ರಸ್ತುತ ಎರಡನೇ ಹಂತದ ಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ