ಕೇಂದ್ರದ ವಿರುದ್ಧ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಶುಕ್ರವಾರ, 3 ಏಪ್ರಿಲ್ 2015 (12:33 IST)
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯಿದೆಯನ್ನು ವಿರೋಧಿಸಿ ರಾಜ್ಯದ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೌರ್ಯ ಸರ್ಕಲ್ ಬಳಿ ಇಂದು ಪ್ರತಿಭಟನೆ ನಡೆಸಿದರು.
 
ನಗರದಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಾದೇಶಿಕ ಕಚೇರಿಯಿಂದ ಆರಂಭವಾದ ಪ್ರತಿಭಟನೆಯು ನೇರವಾಗಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ನಗರದ ಖಾಸಗಿ ಹೋಟೆಲ್ ಕಡೆಗೆ ತೆರಳುತ್ತಿತ್ತು. ಅಲ್ಲದೆ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಅವರೂ ಪಾಲ್ಗೊಂಡಿರುವ ಕಾರಣ ನೇರವಾಗಿ ಅವರನ್ನೇ ಪ್ರಶ್ನಿಸುತ್ತೇವೆ ಎಂದು ಪಟ್ಟು ಹಿಡಿದಿದ್ದ ಕಾರ್ಯಕರ್ತರು, ಹೋಟೆಲ್‌ಗೆ ಮುತ್ತಿಗೆ ಹಾಕುವ ಯತ್ನದಲ್ಲಿದ್ದರು. ಇದನ್ನು ಮನಗಂಡ ಪೊಲೀಸರು ರಸ್ತೆಯ ಮಧ್ಯಭಾಗದಲ್ಲಿಯೇ ಕಾರ್ಯಕರ್ತರನ್ನು ಬಂಧಿಸಿ ನಗರದ ಉಪ್ಪಾರಪೇಟೆ ಠಾಣೆಗೆ ಕರೆದೊಯ್ದರು. 
 
ಇನ್ನು ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಪ್ರಧಾನಿ ಮೋದಿ ಅವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ರೈತ ವಿರೋಧಿಯಾದ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದ್ದು, ಸರ್ಕಾರ ಸುಗ್ರೀವಾಜ್ಞೆಯನ್ನೂ ಹೊರಡಿಸಿದೆ. ಅದು ರೈತ ವಿರೋಧಿಯಾಗಿದ್ದು, ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. 
 
ಇದೇ ವೇಳೆ, ಸರ್ಕಾರದ ಪ್ರತಿನಿಧಿಗಳು ವಿದೇಶದಲ್ಲಿರುವ ಕಪ್ಪುಹಣವನ್ನು ಸ್ವದೇಶಕ್ಕೆ ತರಲಿದ್ದೇವೆ. ಆ ಹಣ ತಂದಲ್ಲಿ ದೇಶದ ಪ್ರತೀ ನಾಗರೀಕನಿಗೆ 15 ಲಕ್ಷ ಜಮಾವಣೆಯಾಗಲಿದೆ ಎಂದು ತಿಳಿಸಿದ್ದರು. ಆದರೆ ಅಧಿಕಾರ ಬಂದು 10 ತಿಂಗಳು ಕಳೆದರೂ ಕೂಡ ಚುನಾವಣೆಗೂ ಮುನ್ನವೇ ನೀಡಿದ್ದ ಆ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಿ ಎಂದು ಆಗ್ರಹಿಸಿದರು.   
 
ಪ್ರತಿಭಟನೆಯು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದಿದ್ದು, ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಸಚಿವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು. ನಗರದಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ.  

ಪ್ರತಿಭಟನಾ ವೇಳೆ ಕಪ್ಪು ಹಣದ ವಿಷಯವಾಗಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ 15 ಲಕ್ಷ ಎಂದು ನಮೂದಿಸಿದ್ದ ನಕಲಿ ಚೆಕ್‌ಗಳನ್ನು ವಿತರಿಸಿದರು. 

ವೆಬ್ದುನಿಯಾವನ್ನು ಓದಿ