ಕಾಶಿಯಲ್ಲಿದೆ ಅದ್ಭುತ ಬಿಂದು ಮಾಧವ ದೇವಾಲಯ

ಜಿ. ಗಿರೀಶ್

ಶುಕ್ರವಾರ, 5 ಜನವರಿ 2018 (15:55 IST)
ವಾರಣಾಸಿ ಅಥವಾ ಕಾಶಿ ಎಂದೊಡನೆ ನಮಗೆ ನೆನಪಿಗೆ ಬರುವುದು ಕಾಶಿ ವಿಶ್ವನಾಥ ಮಂದಿರ. ಆದರೆ ಕಾಶಿ ಇನ್ನೂ ಹಲವಾರು ಮಂದಿರಗಳ ಮಹತ್ವವನ್ನು ಹೊಂದಿದೆ, ಅದರಲ್ಲಿ ಬಿಂದು ಮಾಧವ ದೇವಾಲಯ ಒಂದು. ಕಾಶಿಯನ್ನು ಸಪ್ತ ಮೋಕ್ಷ ಸ್ಥಳಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ಕಾಶಿಯನ್ನು ವಿಷ್ಣು ಕಾಶಿ ಮತ್ತು ಶಿವ ಕಾಶಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಆದಿ ಕೇಶವ ಘಾಟ್‌ವರೆಗೆ ವಿಷ್ಣು ಕಾಶಿ ಮತ್ತು ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಅಸ್ಸಿ ಘಾಟ್‌ವರೆಗೆ ಶಿವ ಕಾಶಿ ಎಂದು ಹೇಳಲಾಗುತ್ತದೆ. ಗ್ರಂಥಗಳ ಪ್ರಕಾರ ಶಿವನ ವಿನಂತಿಯ ಮೇರೆಗೆ ವಿಷ್ಣು ಕಾಶಿಯನ್ನು ಶಿವನಿಗೆ ದಾನವಾಗಿ ನೀಡಿದ. ವಿಷ್ಣುವಿನಿಂದ ಶಿವನು ಕಾಶಿಯನ್ನು ಸ್ವೀಕರಿಸಿದ ನಂತರ ಅರ್ಧ ಭಾಗವನ್ನು ವಿಷ್ಣುವಿಗೇ ಹಿಂತಿರುಗಿ ದಾನವಾಗಿ ನೀಡಿದ ಎಂದು ಹೇಳಲಾಗುತ್ತದೆ. 
 
ಕಾಶಿ ಅಥವಾ ವಾರಣಾಸಿಯ ಮುಖ್ಯ ದೇವಾಲಯಗಳಾದ ಕಾಶಿ ವಿಶ್ವನಾಥ, ಕಾಲಭೈರವ ಹಲವರಿಗೆ ತಿಳಿದಿರುತ್ತದೆ ಆದರೆ ಬಿಂದು ಮಾಧಮ ಮಂದಿರ ಹೆಚ್ಚಿಗೆ ತಿಳಿದಿರುವುದಿಲ್ಲ. ಆದರೆ ನಿಜಾಂಶದಲ್ಲಿ ಬಿಂದು ಮಾಧವ ಮಂದಿರದ ದರ್ಶನವಿಲ್ಲದೆ ಕಾಶಿ ಪ್ರವಾಸ ಪೂರ್ಣಗೊಳ್ಳುವುದಿಲ್ಲ ಎಂದು ಹೇಳುತ್ತಾರೆ.
 
ವಿಷ್ಣು ಕುಂಡ
 
ವಿಷ್ಣುವಿಗೆ ಕೃತಜ್ಞತಾಪೂರ್ವವಾಗಿ ಶಿವನು ವಿಷ್ಣು ಕುಂಡವನ್ನು ರಚಿಸಿದನೆಂದು ಹೇಳಲಾಗುತ್ತದೆ. ಈ ಕುಂಡದಲ್ಲಿ ಭಕ್ತಾದಿಗಳು ಮಧ್ಯಾಹ್ನ 12 ಗಂಟೆಗೆ ಸ್ನಾನ ಮಾಡಿದರೆ ಅವರು ಹುಟ್ಟು ಮತ್ತು ಸಾವಿನಿಂದ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ವಿಷ್ಣು ಕುಂಡದಲ್ಲಿ ಒಮ್ಮೆ ಶಿವನ ಕಿವಿಯ ಆಭರಣದ ರತ್ನವು ಬಿದ್ದ ಕಾರಣ ಇದನ್ನು ಮಣಿಕರ್ಣಿಕಾ ಕುಂಡ ಎಂದೂ ಕರೆಯುತ್ತಾರೆ. 
ಬಿಂದು ಮಾಧವ ದೇವಾಲಯ ಇತಿಹಾಸ
ಈ ಬಿಂದು ಮಾಧವ ದೇವಾಲಯವು ಪಂಚಗಂಗಾ ಘಾಟ್ ಬಳಿ ನೆಲೆಸಿದೆ. ಒಂದು ನಂಬಿಕೆಯ ಪ್ರಕಾರ ಮಹಾವಿಷ್ಣು ಪಂಚಗಂಗಾ ಘಾಟ್‌ನಲ್ಲಿ ಸ್ನಾನ ಮಾಡಿ, ಇಲ್ಲಿಯೇ ಬಿಂದು ಮಾಧವ ಮಂದಿರವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಈ ದೇವಾಲಯವು ಮೊದಲಿಗೆ ತೀರ್ಥಕ್ಷೇತ್ರಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು ಎನ್ನಲಾಗಿದೆ. ಮೂಲ ಮಂದಿರವನ್ನು 1669 ರಲ್ಲಿ ಔರಂಗಜೇಬ್‌ನ ಆಳ್ವಿಕೆಯಲ್ಲಿ ನಾಶಪಡಿಸಲಾಗಿತ್ತು ಎಂದು ಹೇಳಲಾಗುತ್ತದೆ. ಅದರ ನಂತರ 1672 ರಲ್ಲಿ ಇದನ್ನು ಛತ್ರಪತಿ ಶಿವಾಜಿ ಮಹಾರಾಜನು ಈ ಪ್ರಸ್ತುತ ಮಂದಿರವನ್ನು ನಿರ್ಮಿಸಿದನು ಮತ್ತು ಮಂದಿರಲ್ಲಿ ಬಿಂದು ಮಾಧವ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗುತ್ತದೆ. ಅದುವರೆಗೂ ವಿಗ್ರಹವನ್ನು ಪೂಜಾರಿಗಳು ಗಂಗಾ ನದಿಯಲ್ಲಿ ಮುಳುಗಿಸಿ ಕಾಪಾಡಿದ್ದರು ಎಂದು ಹೇಳಲಾಗುತ್ತದೆ. 19ನೇ ಶತಮಾನದಲ್ಲಿ ಮರಾಠರ ರಾಜ ಭವಾನ್ ರಾವ್ ಈ ಮಂದಿರವನ್ನು ನವೀಕರಿಸಿದನು ಎಂದು ತಿಳಿದುಬಂದಿದೆ. ಕವಿ ತುಳಸೀದಾಸರು ಈ ಬಿಂದು ಮಾಧವನ ಎದುರಿಗೆ ಕುಳಿತು ದೇವರ ಬಗ್ಗೆ ಹಾಡಿ ಹೊಗಳಿದ್ದಾರೆ.
 
ಬಿಂದು ಮಾಧವ ವಿಗ್ರಹವು ತುಂಬಾ ಆಕರ್ಷಕವಾಗಿದೆ. ಇದು ಸ್ವಯಂ ರಚಿತವಾದ ಶಾಲಿಗ್ರಾಮ ವಿಗ್ರಹವಾಗಿದೆ. ಬಿಂದು ಮಾಧವ ವಿಗ್ರಹವು ನಾಲ್ಕು ಬಾಹುಗಳನ್ನು ಹೊಂದಿರುವ ನಾರಾಯಣ ಸ್ವರೂಪವಾಗಿದ್ದು, ಲಕ್ಷ್ಮಿ ಸಮೇತನಾಗಿ ಕೈಯಲ್ಲಿ ಪಾಂಚಜನ್ಯ, ಸುದರ್ಶನ ಚಕ್ರ, ಕಮಲ ಪುಷ್ಪ ಮತ್ತು ಕೌಮೋದಕಿಯನ್ನು ಹಿಡಿಯಲಾಗಿದೆ.
 
ಹೆಸರಿನ ಹಿನ್ನೆಲೆ
ಅಗ್ನಿ ಬಿಂದು ಋಷಿ ಎಂಬ ಋಷಿಯು ನೇಪಾಳದಲ್ಲಿನ ಮುಕ್ತಿನಾಥ್‌ನಲ್ಲಿ ಗಂಡಕಿ ನದಿ ತೀರದಲ್ಲಿ ವಿಷ್ಣು ಕುರಿತು ತಪಸ್ಸು ಆಚರಿಸಿದ. ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು ಅವನಿಗೆ ವರಗಳನ್ನು ನೀಡಿ, ವಿಷ್ಣುವಿನ ವಿಗ್ರಹವನ್ನು ಕಾಶಿಯಲ್ಲಿ ಸ್ಥಾಪಿಸಬೇಕೆಂದು ಮತ್ತು ಅರ್ಧ ಹೆಸರನ್ನು ಋಷಿ ಹೆಸರಿನಿಂದ ಮತ್ತು ಇನ್ನು ಅರ್ಧವನ್ನು ವಿಷ್ಣುವಿನ ಹೆಸರಿನಿಂದ ಕರೆಯಬೇಕು ಎಂದು ಸೂಚಿಸಿದನು. ಆದ್ದರಿಂದಾಗಿ ಈ ದೇವರನ್ನು ಬಿಂದು ಮಾಧವ ಎಂಬ ಹೆಸರಿನಿಂದ ಕರೆಯಲಾಯಿತು.
 
ಮಹಾವಿಷ್ಣುವು ತನ್ನ ಭಕ್ತರಿಗೆ ಕಾಶಿಯಲ್ಲಿ ಬಿಂದು ಮಾಧವನಾಗಿ, ಪ್ರಯಾಗದಲ್ಲಿ ವೇಣಿ ಮಾಧವನಾಗಿ, ರಾಮೇಶ್ವರದಲ್ಲಿ ಸೇತು ಮಾಧವನಾಗಿ, ಕಾಕಿನಾಡಾ ಹತ್ತಿರವಿರುವ ಪಿತಾಪುರಂನಲ್ಲಿ ಕುಂತಿ ಮಾಧವನಾಗಿ ಹಾಗೂ ತಿರುವನಂತಪುರದಲ್ಲಿ ಸುಂದರ ಮಾಧವನಾಗಿ ದರ್ಶನ ನೀಡುತ್ತಾನೆ. ಆದ್ದರಿಂದಾಗಿ ಈ ಐದು ಕ್ಷೇತ್ರಗಳನ್ನು ಪಂಚ ಮಾಧವ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ. ಅಲ್ಲದೆ ಈ ಐದು ದೇವರುಗಳನ್ನು ಇಂದ್ರದೇವನು ತನ್ನ ಶಾಪ ವಿಮೋಚನೆಗಾಗಿ ಸ್ಥಾಪಿಸಿದನು ಎಂಬ ನಂಬಿಕೆಯೂ ಇದೆ.
 
ವಾರಣಾಸಿಯಲ್ಲಿ ಯಮುನಾ, ಗಂಗಾ, ಸರಸ್ವತಿ, ಕಿರಣ ಮತ್ತು ದೂತ್‌ಪಾಪ ಎಂಬ ಐದು ನದಿಗಳು ಪಂಚ ಗಂಗೆಯಾಗಿ ಬಿಂದು ಮಾಧವನ ಚರಣ ಕಮಲಗಳಿಂದ ಹರಿದು ಬರುತ್ತದೆ. ಋಷಿ ದೇವಶೀರನ ಮಗಳಾದ ದೃತ್‌ಪಾಪಳ ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು, ಪಂಚಗಂಗೆಯಲ್ಲಿ ಸ್ನಾನ ಮಾಡಿ ಯಾರು ಬಿಂದು ಮಾಧವನ ದರ್ಶನ ಪಡೆಯುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಎಂಬ ವರವನ್ನು ನೀಡುತ್ತಾನೆ.
 
ಬಿಂದು ಮಾಧವ ಮಂದಿರದಲ್ಲಿ ಹಲವಾರು ಉತ್ಸವಗಳನ್ನು ಆಚರಿಸಿಕೊಂಡು ಬರಲಾಗಿದೆ. ಇದರಲ್ಲಿ ಕಾರ್ತಿಕ ಮಾಸವು (ಅಕ್ಟೋಬರ್-ನವೆಂಬರ್) ಬಹಳ ಶ್ರೇಷ್ಠವಾದದ್ದು. ಈ ತಿಂಗಳನ್ನು ಹೆಚ್ಚು ವೈಭವಯುತವಾಗಿ ಆಚರಿಸಲಾಗುತ್ತದೆ.
 
ಬಿಂದು ಮಾಧವ ದೇವಾಲಯದ ಸಮಯ
ಬೆಳಗ್ಗೆ 5.00 ರಿಂದ ಮಧ್ಯಾಹ್ನ 12.00 ರವರೆಗೆ
ಸಂಜೆ 4.00 ರಿಂದ ರಾತ್ರಿ 7 ರವರೆಗೆ
 
ಬಿಂದು ಮಾಧವ ದೇವಾಲಯಕ್ಕೆ ತಲುಪುವ ಮಾರ್ಗ
ಈ ದೇವಾಲಯವನ್ನು ಎರಡು ಹಾದಿಗಳಿಂದ ತಲುಪಬಹುದಾಗಿರುತ್ತದೆ. ರಸ್ತೆಯ ಮೂಲಕ ಕಾಳಭೈರವ ದೇವಾಲಯದಿಂದ ಈ ದೇವಾಲಯಕ್ಕೆ 1.5 ಕಿ.ಮೀ. ಅಂತರವಿದೆ. ಮತ್ತೊಂದು ಹಾದಿ ಎಂದರೆ ಅಸ್ಸಿ ಘಾಟ್‌ನಿಂದ ಪಂಚಗಂಗಾ ಘಾಟ್‌ಗೆ ಬೋಟ್ ಮೂಲಕ ಪ್ರಯಾಣಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ