ಕಣ್ಮನ ಸೆಳೆಯುವ ತುಂಗಭದ್ರಾ ಉದ್ಯಾನವನ

ಶನಿವಾರ, 22 ನವೆಂಬರ್ 2014 (14:26 IST)
ಹೊಸಪೇಟೆ ಬಸ್ ನಿಲ್ದಾಣದಲ್ಲಿ 'ಟಿ.ಬಿ.'(ತುಂಗಭದ್ರಾ ಜಲಾಶಯ) ಎಂಬ ನಾಮಫಲಕ ಹೊತ್ತ ಬಸ್‌ನಲ್ಲಿ ಹತ್ತಿ ಕುಳಿತರೆ. ಕೇವಲ 20ನಿಮಿಷಗಳಲ್ಲಿ ನಮ್ಮನ್ನು ಕಣ್ಮನ ಸೆಳೆವ ಸುಂದರ ತಾಣವೊಂದಕ್ಕೆ ಕೊಂಡೊಯ್ಯುತ್ತದೆ. ಬಸ್‌ನಿಂದ ಇಳಿದು ಸುತ್ತಲೂ ಕಣ್ಣುಹಾಯಿಸಿದರೆ ಪ್ರಕೃತಿ ಸೌಂದರ್ಯದ ರಾಶಿಯೇ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಉದ್ಯಾನವನ, ಕಾರಂಜಿಗಳು, ಜಿಂಕೆವನ, ಗುಲಾಬಿವನ, ಮತ್ಸ್ಯಾಲಯ, ಪಕ್ಷಿಧಾಮ...ಹೀಗೆ ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುತ್ತದೆ.
 
ರಾಜ್ಯದ ಬಳ್ಳಾರಿ, ರಾಯಚೂರು ಮತ್ತು ಆಂಧ್ರದ ಕರ್ನೂಲ್, ಅನಂತಪುರ ಜಿಲ್ಲೆಗಳಿಗೆ ನೀರುಣಿಸುವ ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ ಪ್ರಾರಂಭವಾದದ್ದು 1945ರಲ್ಲಿ. ಸುಮಾರು 20ಕೋಟಿ ರೂಪಾಯಿ ವೆಚ್ಚದಲ್ಲಿ ರೂಪುಗೊಂಡ ಈ ಜಲಾಶಯದ ಕೆಳಭಾಗದಲ್ಲಿ ಮೈಸೂರಿನ ಕೆಆರ್‌ಎಸ್ ಮಾದರಿಯಲ್ಲಿ ಉದ್ಯಾನವನ್ನು ಕೂಡ ಅಭಿವೃದ್ಧಿಪಡಿಸಲಾಯಿತು.
 
ತುಂಗಭದ್ರಾ ಉದ್ಯಾನ ಈಗ ಹೊಸ ಮೆರುಗು ಪಡೆದು ಎಲ್ಲರ ಗಮನ ಸೆಳೆಯುವ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಹಂಪೆಗೆ ಬರುವ ಪ್ರವಾಸಿಗರನ್ನು ತನ್ನೆಡೆ ಸೆಳೆಯುತ್ತದೆ.
 
ಉದ್ಯಾನದ ಪೂರ್ವ ದಿಕ್ಕಿನಲ್ಲಿರುವ ಜಿಂಕೆವನ ಹಿರಿಯರು-ಕಿರಿಯರೆನ್ನದೆ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಒಂದೆಡೆ ಕೃಷ್ಣಮೃಗ ಹಾಗೂ ನೀಲ್‌ಗಾಯ್ ಜಾತಿಯ ಜಿಂಕೆಗಳು ನರ್ತನದಲ್ಲಿ ನಿರತವಾಗಿದ್ದರೆ, ಇನ್ನೊಂದೆಡೆ ಕಡವೆಗಳು ಹಿಂಡು,ಹಿಂಡಾಗಿ ಓಟದ ಸ್ಪರ್ಧೆಯಲ್ಲಿ ತೊಡಗಿದ್ದು ಉದ್ಯಾನಕ್ಕೆ ನಿಸರ್ಗಧಾಮದ ಕಳೆ ತಂದಿವೆ. 
 
ಜಿಂಕೆವನದ ಪಕ್ಕದಲ್ಲೇ ಮನೆ ಗಾತ್ರದ ಹಕ್ಕಿ ಪಂಜರವಿದೆ. ಅದರೊಳಗೆ ಭಾರತದಲ್ಲಿ ಕಂಡುಬರುವ ವಿವಿಧ ಜಾತಿಯ ಹಕ್ಕಿಗಳ ಕಲರವ. ನೀವು ನೋಡಿರದ ಹಲವಾರು ಬಾನಾಡಿಗಳು ಇಲ್ಲಿವೆ. ಜಿಂಕೆವನ, ಪಕ್ಷಧಾಮ ಮತ್ತು ಗುಲಾಬಿ ವನದ ದರ್ಶನ ಪಡೆದು ಪ್ರಧಾನ ಉದ್ಯಾನದ ಒಳಹೊಕ್ಕರೆ ಅಲ್ಲಿ ನಮಗೆ ಬೇರೊಂದು ರಮ್ಯ ಲೋಕ ತೆರೆದುಕೊಳ್ಳುತ್ತದೆ. ನೆರಳಿನ ವೃಕ್ಷಗಳು, ಅಲಂಕಾರಿಕ ಸಸ್ಯಗಳು, ಕೊಳಗಳು, ಕಾರಂಜಿಗಳು ಇವೆಲ್ಲಕ್ಕಿಂತ ಉದ್ಯಾನದ ಸ್ವಚ್ಚತೆ ನಮ್ಮ ಗಮನ ಸೆಳೆಯುತ್ತದೆ.
 
ಉದ್ಯಾನದಲ್ಲಿನ ಮತ್ಸ್ಯಾಲಯ ಕೂಡ ವಿಶಿಷ್ಟವಾಗಿದೆ. ಇದೊಂದು ತೇಲುವ ಮತ್ಸ್ಯಾಲಯ. ಮೀನುಗಳು ತುಂಬಿದ ನೀರಿನ ಕೊಳದಲ್ಲಿ ಕಂಬಗಳ ಆಧಾರದ ಮೇಲೆ ಕಟ್ಟಡ ನಿಂತಿದೆ. ಈ ಕಟ್ಟಡದಲ್ಲಿ ಭಾರತದ ನದಿ ಹಾಗೂ ಸಮುದ್ರದಲ್ಲಿ ಕಂಡುಬರುವ ಎಲ್ಲಾ ಜಾತಿಯ ಮೀನುಗಳನ್ನು ಸಾಕಿದ್ದಾರೆ.
 
ತಪುಪುವ ವ್ಯವಸ್ಥೆ: ತುಂಗಭದ್ರಾ ಉದ್ಯಾನ ಹೊಸಪೇಟೆಯಿಂದ 6ಕಿ.ಮೀ. ದೂರದಲ್ಲಿದೆ. ಹೊಸಪೇಟೆಯಿಂದ 15ನಿಮಿಷಕ್ಕೊಂದು ಬಸ್ ಇದೆ. ಹೊಸಪೇಟೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಬೇಕಾದ ಲಾಡ್ಜ್ ವ್ಯವಸ್ಥೆಯೂ ಇದೆ.

ವೆಬ್ದುನಿಯಾವನ್ನು ಓದಿ