ಗುಜರಾತ್‌ ಸರಕಾರದ ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡಿ ಮೋದಿ ಅಭಿಮಾನಿ

ಬುಧವಾರ, 19 ಮಾರ್ಚ್ 2014 (15:46 IST)
PTI
ಗುಜರಾತ್ ಸರಕಾರದ ವೆಬ್‌ಸೈಟ್‌ನ್ನು ಅನಧಿಕೃತವಾಗಿ ಹ್ಯಾಕ್ ಮಾಡಿ, ಸೈಟ್ ತುಂಬೆಲ್ಲಾ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬೃಹತ್ ಚಿತ್ರಗಳನ್ನು ಪೋಸ್ಟ್ ಮಾಡಿ ಮೋದಿ ಅಭಿಮಾನಿಯೊಬ್ಬ ತನ್ನ ದುರಾಭಿಮಾನವನ್ನು ಮೆರೆದಿದ್ದಾನೆ.

ವೆಬ್‌ಸೈಟ್ ಹ್ಯಾಕ್‌ ಮಾಡಿದ ವ್ಯಕ್ತಿ ತನ್ನನ್ನು ತಾನು ಸ್ಪೈಡರ್ ಮೋದಿ ಅಭಿಮಾನಿ ಎಂದು ಹೇಳಿಕೊಂಡಿದ್ದು, ನರೇಂದ್ರ ಮೋದಿ ನಾನು ನಿಮ್ಮ ಅಭಿಮಾನಿ ಖಂಡಿತವಾಗಿ ಮುಂದಿನ ಪ್ರಧಾನಿಯಾಗಲಿದ್ದೀರಿ ಎಂದು ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.

www.gujaratitdirectory.com ಎನ್ನುವ ಸರಕಾರಿ ವೆಬ್‌ಸೈಟ್‌‌ನಲ್ಲಿ‌ ರಾಜ್ಯದ ಐಟಿ ಉದ್ಯಮಗಳ ಸಂಪೂರ್ಣ ವಿವರಗಳು ಲಭ್ಯವಿವೆ.

ಗುಜರಾತ್‌ ಎಲೆಕ್ಟ್ರಾನಿಕ್ಸ್ ಆಂಡ್ ಸಾಫ್ಟ್‌ವೇರ್ ಇಂಡಸ್ಟ್ರೀಸ್ ಅಸೋಸಿಯೇಶನ್ ಮತ್ತು ಸ್ಟೇಟ್ ಗವರ್ನಮೆಂಟ್ ಕಂಪೆನಿ ಗುಜರಾತ್ ಇನ್‌ಫಾರ್ಮಾಟಿಕ್ಸ್ ಲಿಮಿಟೆಡ್‌ ಜಂಟಿಯಾಗಿ ವೆಬ್‌ಸೈಟ್ ಆರಂಭಿಸಿವೆ.

ವೆಬ್‌ಸೈಟ್ ಹ್ಯಾಕ್ ಆಗಿದೆ ಎನ್ನುವುದು ಖಚಿತವಾದ ನಂತರ ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳು ನಾಶವಾಗದಂತೆ ತಡೆಯಲು ಗುಜರಾತ್‌ ಎಲೆಕ್ಟ್ರಾನಿಕ್ಸ್ ಆಂಡ್ ಸಾಫ್ಟ್‌ವೇರ್ ಇಂಡಸ್ಟ್ರೀಸ್ ಅಸೋಸಿಯೇಶನ್ ಸೂಕ್ತ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ