ಹೌಸ್‌ಫುಲ್: ಈ ಬೇಸಗೆಯಲ್ಲಿ ನೋಡಿ, ಮಸ್ತ್ ಮಜಾ ಮಾಡಿ

ಚಿತ್ರ- ಹೌಸ್‌ಫುಲ್
ನಿರ್ದೇಶನ- ಸಾಜಿದ್ ಖಾನ್
ತಾರಾಗಣ- ಅಕ್ಷಯ್ ಕುಮಾರ್, ಅರ್ಜುನ್ ರಾಂಪಾಲ್, ರಿತೇಶ್ ದೇಶ್‌ಮುಖ್, ಲಾರಾ ದತ್ತ, ದೀಪಿಕಾ ಪಡುಕೋಣೆ, ಜಿಯಾ ಖಾನ್, ಬೋಮನ್ ಇರಾನಿ, ರಣಧೀರ್ ಕಪೂರ್

IFM
ಐಪಿಎಲ್ ಮ್ಯಾಚುಗಳ ನಡುವಿನ ಸಿನಿಮಾ 'ಬರ'ದ ನಂತರ ಇದೀಗ ಒಂದು ಬಹು ನಿರೀಕ್ಷೆಯ ಚಿತ್ರ ಬಿಡುಗಡೆಯಾಗಿದೆ. ಸಾಜಿದ್ ಖಾನ್ ಅವರ ಹೌಸ್‌ಫುಲ್ ಎಂಬ ಪಕ್ಕಾ ಕಾಮಿಡಿಯ ಮನರಂಜನಾತ್ಮಕ ಚಿತ್ರ ಈಗ ಥಿಯೇಟರಿಗೆ ಲಗ್ಗೆಯಿಟ್ಟಿದೆ. ಬೇಸಗೆ ರಜೆಗಾಗಿ ಮನರಂಜನೆಯ ಊಟ ಎಂದೇ ಹೇಳುತ್ತಲೇ ಬಂದಿರುವ ಚಿತ್ರತಂಡ ನಿಜಕ್ಕೂ ನಿಮಗೆ ಕೊಂಚ ಆರಾಮದಾಯಕ ಸುಖಸಂಜೆಯ ನಗುವನ್ನು ನೀಡಬಹುದು. ಕುಟುಂಬ ಸಮೇತರಾಗಿ ನಕ್ಕು ಹಗುರಾಗಬಹುದು.

ಜೀವನದಲ್ಲಿ ಕಳೆದುಕೊಂಡವರ ಕಥೆಯಿದು. ಪ್ಕಕಾ ದುರದೃಷ್ಟವಂತ ಆರುಶ್ (ಅಕ್ಷಯ್ ಕುಮಾರ್) ತನ್ನ ಮತ್ತೊಬ್ಬ ದುರದೃಷ್ಟವಂತ ಬಾಬ್ (ರಿತೇಶ್ ದೇಶ್‌ಮುಖ್) ಹಾಗೂ ಅತನ ಪತ್ನಿ ಹೇತಲ್ (ಲಾರಾ) ಮನೆಗೆ ಹೋಗುತ್ತಾನೆ. ಆದರೆ ಪರಿಸ್ಥಿತಿ ಆತನನ್ನು ಮತ್ತಷ್ಟು ದುರದೃಷ್ಟವಂತನಂತೆ ಮಾಡುತ್ತದೆ. ಇದೇ ಸಂದರ್ಭ ಈತನ ಜೀವನದಲ್ಲಿ ಸ್ಯಾಂಡಿ (ದೀಪಿಕಾ) ಹಾಗೂ ದೇವಿಕಾ (ಜಿಯಾ ಖಾನ್) ಪ್ರವೇಶವಾಗುತ್ತದೆ. ಈಗ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತದೆ. ಅದೇನು ಎಂಬುದಕ್ಕೆ ಚಿತ್ರ ನೋಡಬೇಕು. ಅಷ್ಟೇ ಅಲ್ಲ, ಜೀವನದ ಒಂದು ಸಾಮಾನ್ಯ ಕಥೆಯನ್ನು ನವಿರು ಹಾಸ್ಯದೊಂದಿಗೆ ಲಿಂಕಿಸಿ ಕಥೆ ಹೆಣೆಯಲಾಗಿದೆ.

IFM
ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತೆ ತಮ್ಮ ಹಳೆಯ ತಮಾಷೆಗೆ ಮರಳಿದ್ದಾರೆ. ತಮ್ಮ ನಗುವಿನ ಜೊತೆಗೆ ಚಿತ್ರ ನೋಡುಗರನ್ನೂ ಮುಗ್ಧವಾಗಿ ನಗಿಸುತ್ತಾರೆ. ರಿತೇಶ್ ದೇಶ್‌ಮುಖ್ ಕೂಡಾ ಮತ್ತೊಬ್ಬ ಹಾಸ್ಯ ಚಕ್ರವರ್ತಿಯಾಗಿ ಚಿತ್ರದಲ್ಲಿ ಮೇಳೈಸಿದ್ದಾರೆ. ಅರ್ಜುನ್ ರಾಂಪಾಲ್ ತನ್ನ ಪಾತ್ರಕ್ಕೆ ಸಮರ್ಥವಾಗಿ ನ್ಯಾಯ ಕರುಣಿಸಿದ್ದಾರಲ್ಲದೆ, ಈ ಪಾತ್ರಕ್ಕೆ ಇವರೇ ಸರಿಯಾದ ಆಯ್ಕೆ ಎಂಬಂತೆ ತೋರುತ್ತಾರೆ.

ಬೋಮನ್ ಇರಾನಿ ನಟನೆಯ ಬಗ್ಗೆ ಎರಡು ಮಾತೇ ಇಲ್ಲ. ಜಿಯಾ ಖಾನ್ ಅವರ ಸಿಂಧಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡ ರಣಧೀರ್ ಕಪೂರ್ ಅವರಿಗೆ ಹೆಚ್ಚು ಸ್ಕೋಪ್ ಇಲ್ಲ. ಆದರೆ ಕೆಲವೊಮ್ಮೆ ಚುಂಕಿ ಪಾಂಡೆ ಇರಿಟೇಟ್ ಮಾಡುತ್ತಾರೆ.

ಇನ್ನು ನಾಯಕಿ ನಟಿಯರ ಪೈಕಿ ದೀಪಿಕಾ ಪಡುಕೋಣೆ, ಲಾರಾ ದತ್ತ, ಜಿಯಾ ಖಾನ್ ಈ ಮೂವರ ಬಗ್ಗೆ ಎರಡು ಮಾತೇ ಇಲ್ಲ. ಮೂರು ಮಂದಿಯೂ ಸ್ಪರ್ಧೆಯೊಡ್ಡುವಂತೆ ತಮ್ಮ ನವಿರಾದ ದೇಹ ಬಳುಕಿಸಿದ್ದಾರೆ. ಸಿಕ್ಕಾಪಟ್ಟೆ ಗ್ಲ್ಯಾಮರ್ ದರ್ಶನ ಮಾಡಿಸಿದ್ದಾರೆ. ಎಲ್ಲರೂ ಅಥ್ಯದ್ಭುತವಾಗಿ ದೇಹಸಿರಿಯಲ್ಲಿ ಮಿಂಚಿದ್ದಾರೆ. ಶಂಕರ್ ಎಹ್ಸಾನ್ ಅವರ ಸಂಗೀತ ನಿಜಕ್ಕೂ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ. ಮಿಕಾ ಸಿಂಗ್ ಈ ಚಿತ್ರದ ಮೂಲಕ ಕೆಲವು ನರ್ತಿಸುವ ಹಾಡುಗಳನ್ನು ಹಾಡಿದ್ದಾರೆ. ಜಾಕ್ವಿಲೀನ್ ಫೆರ್ನಾಂಡಿಸ್ ಅಂತೂ ಒಂದು ಹಾಡಿನಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡು ಮನರಂಜನೆ ನೀಡುವ ಜೊತೆಗೆ ತಾನೊಬ್ಬ ಭವಿಷ್ಯದ ಪ್ರತಿಭೆ ಎಂದು ತೋರಿಸಿದ್ದಾರೆ.

ತಾಂತ್ರಿಕವಾಗಿ ಹೇಳುವುದಾದರೆ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೂ ತೊಂದರೆಯಿರುತ್ತಿರಲಿಲ್ಲ. ಸಂಕಲನ ಸ್ವಲ್ಪ ಟೈಟಾಗಿ ಮಾಡಿದರೆ ಒಳ್ಳೆಯದಿತ್ತು ಎಂದನಿಸಿದರೆ ಅದು ತಪ್ಪಲ್ಲ. ವಿಕಾಸ್ ಶಿವರಾಮನ್ ಅವರ ಕ್ಯಾಮರಾ ಕೆಲಸ ಚೆನ್ನಾಗಿದೆ. ಇಟಲಿಯ ದೃಶ್ಯಗಳನ್ನು ಸೆರೆಹಿಡಿದ ಶೈಲಿ ಚೆನ್ನಾಗಿದೆ. ಒಟ್ಟಾರೆ ಇಡೀ ಹೌಸ್‌ಫುಲ್ ಚಿತ್ರ ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡು ಬಂದಂತೆ ನೋಡಬಲ್ಲ, ಬೇಸಗೆಯ ಮನರಂಜನಾ ಚಿತ್ರವೆಂಬುದರಲ್ಲಿ ಸಂಶಯವೇ ಇಲ್ಲ. ಒಂದು ರಜೆಯ ಸಂಜೆ ಬೋರ್ ಹೊಡೆದಾಗ ಆರಾಮವಾಗಿ ಪಾಪ್ ಕಾರ್ನ್ ತಿನ್ನುತ್ತಾ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ನಕ್ಕು ಹಗುರಾಗಿ, ಮಜಾ ಮಾಡಿ.

ವೆಬ್ದುನಿಯಾವನ್ನು ಓದಿ