ಅತ್ಯಾಚಾರವೆಸಗಿದವನನ್ನು ವಿವಾಹವಾಗಲು 50 ಸಾವಿರ ವರದಕ್ಷಿಣೆ, ಮೋಟಾರ್ ಸೈಕಲ್ ನೀಡುವಂತೆ ಬಾಲಕಿಗೆ ಪಂಚಾಯಿತಿ ಆದೇಶ

ಸೋಮವಾರ, 31 ಮಾರ್ಚ್ 2014 (19:33 IST)
ಬಿಹಾರ್ ರಾಜ್ಯ ಆಘಾತಕಾರಿ ಸುದ್ದಿಗಳಿಗೆ ಕೇಂದ್ರ ಬಿಂದುವಾಗಿದೆ. ಇದೀಗ ಪಂಚಾಯಿತಿಯೊಂದು ಅತ್ಯಾಚಾರವೆಸಗಿದ ಆರೋಪಿಗೆ ಮಗಳನ್ನು ಕೊಟ್ಟು ವಿವಾಹ ಮಾಡುವುದಲ್ಲದೇ 50 ಸಾವಿರ ರೂಪಾಯಿ ವರದಕ್ಷಿಣೆ ಮತ್ತು ಮೋಟಾರ್‌ಸೈಕಲ್ ಕೂಡಾ ನೀಡುವಂತೆ ವ್ಯಕ್ತಿಯೊಬ್ಬನಿಗೆ ಆದೇಶ ನೀಡಿದೆ.

ಪಂಚಾಯಿತಿ ತೀರ್ಪಿನಿಂದ ಕಂಗಾಲಾದ ತಂದೆ ಮತ್ತು ಆತನ 16 ವರ್ಷದ ಮಗಳು ಕಟಿಹಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ, ವಿವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಾಧ್ಯಮಗಳ ಪ್ರಕಾರ, ಅತ್ಯಾಚಾರ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಅತ್ಯಾಚಾರಗೊಳಗಾದ ಬಾಲಕಿಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪಂಚಾಯಿತಿ ನಡೆಸಿದ ವ್ಯಕ್ತಿಗಳು ಪ್ರಭಾವಶಾಲಿಗಳಾಗಿರುವುದರಿಂದ ಅವರನ್ನು ಹೆಸರನ್ನು ಹೇಳಲಾರೆ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾನೆ.

ಗ್ರಾಮಕ್ಕೆ ಹತ್ತಿರವಿರುವ ಅರಣ್ಯದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸುತ್ತಿರುವಾಗ ನೆರೆಮನೆಯಲ್ಲಿ ವಾಸವಿರುವ ಆರೋಪಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ

ಅತ್ಯಾಚಾರಗೊಳಗಾಗಿರುವುದನ್ನು ತಂದೆಗೆ ತಿಳಿಸಿದಾಗ ಗ್ರಾಮಸ್ಥರು ಒಂದೆಡೆ ಸೇರಿ ಪಂಚಾಯಿತಿ ಕರೆದು ಆರೋಪಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸಲಾಯಿತು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ