ಆಂಧ್ರ ಅಸೆಂಬ್ಲಿಯಲ್ಲಿ ತೆಲಂಗಾಣ ರಚನೆ ಮಸೂದೆ ತಿರಸ್ಕೃತ

ಗುರುವಾರ, 30 ಜನವರಿ 2014 (13:03 IST)
PR
PR
ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆ ಗುರುವಾರ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಮಂಡಿಸಿದ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಿದ್ದರಿಂದ ತೆಲಂಗಾಣ ರಚನೆ ಮಸೂದೆ ತಿರಸ್ಕೃತಗೊಂಡಿದೆ. ಹೊಸ ರಾಜ್ಯವನ್ನು ಸೃಷ್ಟಿಸುವ ಮಸೂದೆಯನ್ನು ತಿರಸ್ಕರಿಸಬೇಕೆಂಬ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ನಿರ್ಣಯವನ್ನು ಬಹುತೇಕ ಶಾಸಕರು ಬೆಂಬಲಿಸಿದರು. ಸದನದಲ್ಲಿ ತೀವ್ರ ಗದ್ದಲಉಂಟಾದ ಬಳಿಕ ಸ್ಪೀಕರ್ ಎನ್. ಮನೋಹರ್ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಿದರು.ತೆಲಂಗಾಣ ಮಸೂದೆ ಕುರಿತು ರಾಷ್ಟ್ರಪತಿಗೆ ಅಭಿಪ್ರಾಯ ತಿಳಿಸುವುದಕ್ಕೆ ಗಡುವು ಗುರುವಾರವೇ ಕೊನೆಗೊಳ್ಳಲಿದ್ದು, ಆಂಧ್ರ ಅಸೆಂಬ್ಲಿ ಸ್ಥಗಿತಗೊಂಡಿದೆ.

ತೆಲಂಗಾಣ ಮತ್ತು ಸೀಮಾಂಧ್ರ ಪ್ರದೇಶದ ಶಾಸಕರು ಅಧ್ಯಕ್ಷರ ಪೀಠದ ಎದುರು ತಮ್ಮ ಬೇಡಿಕೆಗಳಿಗೆ ಬೆಂಬಲಿಸಿ ಘೋಷಣೆಗಳನ್ನು ಕೂಗಿದಾಗ ಸ್ಪೀಕರ್ ಮನೋಹರ್ ಸದನವನ್ನು ಮುಂದೂಡಿದರು.

PR
PR
ಮುಖ್ಯಮಂತ್ರಿ ನಿರ್ಣಯ ಮಂಡಿಸುವುದಕ್ಕಾಗಿ ನೀಡಿದ ನೋಟಿಸ್‌ ಅನ್ನು ಸ್ಪೀಕರ್ ತಿರಸ್ಕರಿಸಬೇಕೆಂದು ತೆಲಂಗಾಣ ಶಾಸಕರು ಒತ್ತಾಯಿಸಿದ್ದರು. ರಾಯಲಸೀಮಾ ಮತ್ತು ಕರಾವಳಿ ಆಂಧ್ರದ ಶಾಸಕರು ಮಸೂದೆ ಕುರಿತು ತಕ್ಷಣವೇ ಮತದಾನ ನಡೆಯಬೇಕೆಂದು ಆಗ್ರಹಿಸಿದರು.ತೆಲಂಗಾಣ ಶಾಸಕರ ಪ್ರತಿಭಟನೆಯಿಂದ ಆಂಧ್ರ ಪುನರ್ರಚನೆ ಮಸೂದೆ 2013 ಕುರಿತ ಚರ್ಚೆ ಸ್ಥಗಿತಗೊಂಡಿತ್ತು. ಶಾಸಕಾಂಗದ ಅಭಿಪ್ರಾಯ ತಿಳಿಸಲು ಇನ್ನೂ ಮೂರುವಾರಗಳ ಕಾಲಾವಕಾಶ ಬೇಕೆಂದು ಮುಖ್ಯಮಂತ್ರಿ ತಿಳಿಸಿದ್ದು, ರಾಷ್ಟ್ರಪತಿ ಗಡುವನ್ನು ಮತ್ತೆ ಮುಂದುವರಿಸುವ ಲಕ್ಷಣ ಕಂಡುಬಂದಿಲ್ಲ.

ಆಂಧ್ರವಿಭಜನೆಗೆ ಪ್ರಬಲವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಶುಕ್ರವಾರ ಮಸೂದೆಯನ್ನು ತಿರಸ್ಕರಿಸಿ ಸಂಸತ್ತಿಗೆ ಉಲ್ಲೇಖಿಸದಂತೆ ರಾಷ್ಟ್ರಪತಿಗೆ ಮನವಿಯೊಂದಿಗೆ ವಾಪಸು ಕಳಿಸುವುದಕ್ಕೆ ನಿರ್ಣಯ ಮಂಡಿಸಬೇಕೆಂದು ನೋಟಿಸ್ ಕಳಿಸಿದ್ದರು. ಈಗ ಸಂಸತ್ತಿನಲ್ಲಿ ಮಸೂದೆಯ ಚರ್ಚೆಗೆ ಮತ್ತು ಮತದಾನಕ್ಕೆ ಅನುಮತಿ ನೀಡುವುದು ರಾಷ್ಟ್ರಪತಿಗಳ ಪರಮಾಧಿಕಾರವಾಗಿದೆ. ರಾಷ್ಟ್ರಪತಿಗಳು ತಮ್ಮ ಮುಂದಿನ ಹೆಜ್ಜೆ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸುತ್ತಾರೆಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ