ಕಾಂಗೈ ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್

ಗುರುವಾರ, 28 ಮಾರ್ಚ್ 2013 (12:42 IST)
PTI
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕಸರತ್ತನ್ನು ಗೋವಾ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದ ಸಮಿತಿ ಬುಧವಾರ ಪೂರ್ಣಗೊಳಿಸಿತು. ಸಮಿತಿ ಶಿಫಾರಸು ಮಾಡಿರುವ ಹೆಸರುಗಳನ್ನು ಅಂತಿಮವಾಗಿ ಪರಿಶೀಲಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯ `ಕೇಂದ್ರ ಚುನಾವಣಾ ಸಮಿತಿ' (ಸಿಇಸಿ) ಗುರುವಾರ ಸಭೆ ಸೇರಲಿದೆ.

ಕಾಂಗ್ರೆಸ್ ಮುಖಂಡರ ಲಾಬಿ, ಒತ್ತಡ, ಅಪಸ್ವರ, ಭಿನ್ನಾಭಿಪ್ರಾಯದ ನಡುವೆ 224 ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕೆಲಸವನ್ನು ಫೆಲೆರೊ ಸಮಿತಿ ಮುಗಿಸಿ ಕೈತೊಳೆದುಕೊಂಡಿತು.

ಕೇಂದ್ರ ಸಚಿವ ಜಿತೇಂದ್ರಸಿಂಗ್, ರಾಜ್ಯದ ಉಸ್ತುವಾರಿ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾದಿ ಸಿದ್ಧಪಡಿಸುವ ಕಾರ್ಯದಲ್ಲಿ ಭಾಗಿಯಾದರು.

ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರ ನಡುವೆ ಕೆಲವು ಹೆಸರನ್ನು ಶಿಫಾರಸು ಮಾಡುವ ವಿಷಯದಲ್ಲಿ ತಾಳಮೇಳ ಇರಲಿಲ್ಲ. ಇಬ್ಬರೂ ತಮ್ಮ ತಮ್ಮ ಬೆಂಬಲಿಗರ ಹೆಸರನ್ನು ಸೇರಿಸಲು ಹರಸಾಹಸ ಮಾಡಿದ್ದರಿಂದ ಫೆಲೆರೊ ಇವರ ನಡುವೆ ಸಹಮತ ಏರ್ಪಡಿಸಲು ತಿಣುಕಾಡಿದರು. ಸಮನ್ವಯ ಸಾಧ್ಯವಾಗದ ಕಡೆ ಎರಡೆರಡು ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

ಬಹುತೇಕ ಹಾಲಿ ಶಾಸಕರ ಹೆಸರನ್ನು ಫೆಲೆರೊ ಸಮಿತಿ ಶಿಫಾರಸು ಮಾಡಿದೆ. ಹೆಸರು ಕೆಡಿಸಿಕೊಂಡವರು, ಕ್ಷೇತ್ರಗಳನ್ನು ಕಡೆಗಣಿಸಿದವರು, ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆಗೊಳಗಾದವರೂ ಸೇರಿದಂತೆ ಬೆರಳೆಣಿಕೆ ಶಾಸಕರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿ ಸಿಕ್ಕಿಕೊಂಡಿರುವ ಶಾಸಕರಿಗೂ ಟಿಕೆಟ್ ಸಿಗುವುದು ಕಷ್ಟ.

ಪ್ರಭಾವಿಗಳ ಮಕ್ಕಳಿಗೆ ಟಿಕೆಟ್: 2008ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಚಿವರು, ಪ್ರಭಾವಿ ಮುಖಂಡರು ಇಲ್ಲವೆ ಅವರ ಹತ್ತಿರದ ಸಂಬಂಧಿಕರ ಹೆಸರನ್ನು ಪಟ್ಟಿಯಲ್ಲಿ ಶಿಫಾರಸು ಮಾಡಲಾಗಿದೆ. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮಕ್ಕಳಿಗೆ ವಿಧಾನಸಭೆ ಟಿಕೆಟ್ ಸಿಗುವ ಸಂಭವವಿದೆ. ಈ ಪ್ರಭಾವಿ ಮುಖಂಡರ ಮಕ್ಕಳು ಕೇಳಿರುವ ಕ್ಷೇತ್ರಗಳಿಗೆ ಒಂದು ಹೆಸರನ್ನು ಮಾತ್ರ ಕಳುಹಿಸಲಾಗಿದೆ.

ಹೋದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಸೋಲು ಕಂಡ ಒಂಬತ್ತು ಅಭ್ಯರ್ಥಿಗಳ ಹೆಸರುಗಳು ಕೇಂದ್ರ ಚುನಾವಣಾ ಸಮಿತಿಗೆ ಹೋಗಿರುವ ಪಟ್ಟಿಯಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡುವ ಸಂದರ್ಭದಲ್ಲಿ `ಸಾಮಾಜಿಕ ನ್ಯಾಯ ಸೂತ್ರ' ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಕಳೆದ ಹಾಗೂ ಅದರ ಹಿಂದಿನ ಅಂದರೆ 2004ರ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಜಾತಿ- ಜನಾಂಗ ಮತ್ತು ಅಲ್ಪಸಂಖ್ಯಾತರಿಗೆ ನೀಡಿದ ಸೀಟುಗಳ ಸಂಖ್ಯೆಗಳ ಆಧಾರದ ಮೇಲೆ ಈ ಸಮುದಾಯಗಳಿಗೆ ಸೀಟುಗಳನ್ನು ನಿಗದಿ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಫೆಲೆರೊ ಸಮಿತಿ ಶಿಫಾರಸು ಮಾಡಿರುವ ಹೆಸರುಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸೋನಿಯಾ ನೇತೃತ್ವದ ಚುನಾವಣಾ ಸಮಿತಿ ಗುರುವಾರ ಸಂಜೆ ಸಭೆ ಸೇರುವ ಸಾಧ್ಯತೆಯಿದೆ. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್‌ಸಿಂಗ್ ಹಿಂತಿರುಗಿದ ಬಳಿಕ ಸಭೆ ಆರಂಭವಾಗಲಿದೆ.

ಈ ಚುನಾವಣಾ ಸಮಿತಿಯಲ್ಲಿ ರಾಹುಲ್ ಗಾಂಧಿ, ಎ.ಕೆ. ಆಂಟನಿ, ಅಹಮದ್ ಪಟೇಲ್, ಅಂಬಿಕಾ ಸೋನಿ, ಜನಾರ್ದನ ದ್ವಿವೇದಿ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ, ಮುಕುಲ್ ವಾಸ್ನಿಕ್, ಗಿರಿಜಾ ವ್ಯಾಸ್ ಮತ್ತು ಬಿ.ಕೆ. ಹಂಡಿಕ್ ಅವರಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಮಿತಿ ಕಳುಹಿಸಿರುವ ಅಭ್ಯರ್ಥಿಗಳ ಪಟ್ಟಿಯಿಂದ ಯಾವುದೇ ಹೆಸರನ್ನು ಕೈಬಿಡುವ ಅಥವಾ ಹೊಸದಾಗಿ ಸೇರಿಸುವ ಅಂತಿಮ ಅಧಿಕಾರವನ್ನು ಚುನಾವಣಾ ಸಮಿತಿ ಹೊಂದಿದೆ.

ಮೂರು ಹಂತದ ಸಮೀಕ್ಷೆ: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮೂರು ಹಂತದ ಸಮೀಕ್ಷೆಗಳನ್ನು ಮಾಡಿಸಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಫೆಲೆರೊ ಸಮಿತಿ ಶಿಫಾರಸು ಮಾಡಿರುವ ಹೆಸರುಗಳೊಂದಿಗೆ ತನ್ನ ಬಳಿ ಇಟ್ಟುಕೊಂಡ ಹೆಸರನ್ನು ಹೋಲಿಸಿ ಸಮಗ್ರವಾಗಿ ವಿಶ್ಲೇಷಣೆ ಮಾಡಿದ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪಕ್ಷೇತರ ಸದಸ್ಯರಾದ ಡಿ. ಸುಧಾಕರ, ವೆಂಕಟರಮಣಪ್ಪ, ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಶಿವರಾಜ್ ತಂಗಡಗಿ ಅವರಿಗೂ ಅಭ್ಯರ್ಥಿಗಳ ಆಯ್ಕೆ ಸಮಿತಿ ಹಸಿರು ನಿಶಾನೆ ತೋರಿದೆ. ಆದರೆ, ಸಿ.ಪಿ. ಯೋಗೀಶ್ವರ್, ರಾಜುಗೌಡ ಹಾಗೂ ಪ್ರತಾಪಗೌಡ ಪಾಟೀಲ ಸೇರಿದಂತೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಅನೇಕರ ವಿಷಯದಲ್ಲಿ ಸಮಿತಿ ತೀರ್ಮಾನ ಕೈಗೊಂಡಿಲ್ಲ.

ಕಾಂಗ್ರೆಸ್ ಚುನಾವಣಾ ಸಮಿತಿ ಕಾಂಗ್ರೆಸ್ ಹಿನ್ನೆಲೆಯಿಂದ ಬಂದಿರುವ ಈ ಮುಖಂಡರ ಭವಿಷ್ಯ ಕುರಿತು ನಿರ್ಧಾರ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ. ಈ ಪಟ್ಟಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಮಿತಿ ಗುರುವಾರ ಸಭೆ ಸೇರಲಿದೆ ಎಂದು ಡಾ. ಜಿ. ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ವೆಬ್ದುನಿಯಾವನ್ನು ಓದಿ