'ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆಲಂಗಾಣಕ್ಕೆ ಚಾಲನೆ ನೀಡಿದ ಕಾಂಗ್ರೆಸ್'

ಬುಧವಾರ, 31 ಜುಲೈ 2013 (11:29 IST)
PR
PR
ಅಹ್ಮದಾಬಾದ್: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ತೆಲಂಗಾಣ ರಚನೆಯನ್ನು ಬುಧವಾರ ಸ್ವಾಗತಿಸಿದ್ದಾರೆ. ಆದರೆ ಹಿಂದೆಯೇ ತೆಲಂಗಾಣಕ್ಕೆ ಒತ್ತಾಯ ಮಾಡಿದಾಗಲೆಲ್ಲ ಪದೇ ಪದೇ ವಿಳಂಬ ಧೋರಣೆ ಅನುಸರಿಸುತ್ತಿದ್ದ ಕಾಂಗ್ರೆಸ್‌ ಈ ಬಾರಿ ತೆಲಂಗಾಣ ರಚನೆಯ ನಿಲುವಿಗೆ ಅಂಟಿಕೊಂಡಿದ್ದರ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶದ ಜನತೆಯನ್ನು ಕಾಲುಕಸದಂತೆ ಕಂಡ ಕಾಂಗ್ರೆಸ್ ಅವರ ಕ್ಷಮೆ ಯಾಚಿಸಬೇಕೆಂದು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

'ಈ ವಿಷಯವನ್ನು ಬಹಳ ಕಾಲದವರೆಗೆ ಮುಂದಕ್ಕೆ ತಳ್ಳಿದ ಕಾಂಗ್ರೆಸ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಕೊಡವಿಕೊಂಡು ಎದ್ದು, ತೆಲಂಗಾಣಕ್ಕೆ ಚಾಲನೆ ನೀಡಿದೆ. ಕಳೆದ 9 ವರ್ಷಗಳಿಂದ ತೆಲಂಗಾಣ ರಚನೆಯ ಬಗ್ಗೆ ನುಣುಚಿಕೊಳ್ಳುತ್ತಿದ್ದ ಕಾಂಗ್ರೆಸ್‌ಗೆ ಜನರ ಮತ ಸೆಳೆಯುವುದಕ್ಕಾಗಿ ಕೆಲವೇ ದಿನಗಳಲ್ಲಿ ತೆಲಂಗಾಣದ ಘೋಷಣೆ ಮಾಡಿದೆ. ತೆಲಂಗಾಣ ಕುರಿತು ಕಾಂಗ್ರೆಸ್ ವರ್ತನೆ ಪಾರದರ್ಶಕವಾಗಿಲ್ಲ.

ಚುನಾವಣೆಗೆ ಕೆಲವೇ ತಿಂಗಳ ಮುಂಚಿನ ಈ ನಿರ್ಧಾರವು ರಾಜಕೀಯ ಬಣ್ಣದಿಂದ ಕೂಡಿದೆ.' ಎಂದು ಮೋದಿ ಹೇಳಿದರು. ' ಸ್ನೇಹಿತರೆ, ಕಾಂಗ್ರೆಸ್ 2004ರಲ್ಲಿ ತೆಲಂಗಾಣ ರಾಜ್ಯದ ಭರವಸೆ ನೀಡಿ ಗೆಲುವು ಗಳಿಸಿತು. ಆದರೆ 9 ವರ್ಷಗಳ ಕಾಲ ಜನರ ಆಕಾಂಕ್ಷೆಗಳು ಮತ್ತು ಭಾವನೆಗಳ ಜತೆ ಚೆಲ್ಲಾಟವಾಡಿತು' ಎಂದು ಮೋದಿ ಟೀಕಿಸಿದರು.ಈಗ ಚುನಾವಣೆಗೆ ಕೆಲವೇ ತಿಂಗಳಿರುವಾಗ ತೆಲಂಗಾಣ ಪ್ರಕಟಣೆಗೆ ಧಾವಿಸುತ್ತಿದೆ. ಇದು ಕಾಂಗ್ರೆಸ್‌ನ ಉದ್ದೇಶಗಳು ಮತ್ತು ಗಂಭೀರತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ