ಭಾರತ- ಪಾಕಿಸ್ತಾನ ವಿಭಜನೆಗೆ ಕಾಂಗ್ರೆಸ್ ನೇರ ಹೊಣೆ: ನರೇಂದ್ರ ಮೋದಿ

ಗುರುವಾರ, 21 ನವೆಂಬರ್ 2013 (17:57 IST)
PTI
ಭಾರತ- ಪಾಕಿಸ್ತಾನ ದೇಶ ವಿಭಜನೆಗೆ ಕಾಂಗ್ರೆಸ್ ನೇರ ಕಾರಣವಾಗಿದೆ.ಕಾಂಗ್ರೆಸ್ ಆರಂಭದಿಂದಲೂ ವಿಭಜಿಸಿ ಆಳು ನೀತಿಯನ್ನು ಪಾಲಿಸುತ್ತಾ ಬಂದಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದಿನಂತೆ ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದ ಆಗ್ರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಾಳಜಿಯಿಲ್ಲ. ದೇಶವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಆಸಕ್ತಿಯಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷ ಓಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದ ವಿಭಜಿಸಿ ಆಳು ಧೋರಣೆಯಿಂದಾಗಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಉದಯಿಸಿವೆ. ದೆಹಲಿಯಲ್ಲಿರುವ ಯುಪಿಎ ಸರಕಾರ ಅಧೋಗತಿಯಾಗಿದೆ ಎಂದು ಟೀಕಿಸಿದರು.

ಗುಜರಾತ ರಾಜ್ಯದ ಅಭಿವೃದ್ಧಿಯನ್ನು ಕಂಡು ಅನೇಕ ರಾಜಕೀಯ ಪಂಡಿತರು ದೇಶದ ಎಲ್ಲಾ ರಾಜ್ಯಗಳಲ್ಲಿ ಇಂತಹ ಬದಲಾವಣೆಗಳನ್ನು ತರಬೇಕು ಎಂದು ಹೇಳಿಕೆ ನೀಡಿರುವುದು ಸಂತಸ ತಂದಿದೆ ಎಂದರು.

ಆಗ್ರಾ ಜಿಲ್ಲೆ ಯಮುನಾ ನದಿಯ ದಂಡೆಯ ಮೇಲಿದ್ದರೂ ನೀರಿನ ಬವಣೆಯನ್ನು ಎದುರಿಸುತ್ತಿದೆ. ಗುಜರಾತಿನಲ್ಲಿ ಕೇವಲ ನರ್ಮದಾ ನದಿಯಿದೆ. ಆದರೆ, ರಾಜ್ಯದ ಗಡಿಯನ್ನು ದಾಟಿ ಮರಭೂಮಿಯವರೆಗೆ ಹರಿಸಲು ಯಶಸ್ವಿಯಾಗಿ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ