ರಾಜ್ಯಸಭೆ ಚುನಾವಣೆ: ಕನಿಮೋಳಿಗೆ ಕಾಂಗ್ರೆಸ್ ಬೆಂಬಲವಿಲ್ಲ

ಶನಿವಾರ, 22 ಜೂನ್ 2013 (14:06 IST)
PTI
ಪುತ್ರಿ ಕನಿಮೋಳಿಯನ್ನು ಮತ್ತೂಂದು ಅವಧಿಗೆ ರಾಜ್ಯಸಭೆಗೆ ಕಳುಹಿಸಲು ಡಿಎಂಕೆ ಅಧಿನಾಯಕ ಎಂ. ಕರುಣಾನಿಧಿ ಪ್ರತಿ ಮತಗಳನ್ನು ಕಲೆಹಾಕಲು ಯತ್ನಿಸುತ್ತಿರುವಾಗಲೇ ಡಿಎಂಕೆಗೆ ಪಿಎಂಕೆ ಭರ್ಜರಿ ಆಘಾತ ನೀಡಿದೆ. ಜೂ.27ರಂದು ನಡೆಯುವ ರಾಜ್ಯಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಆ ಪಕ್ಷ ಪ್ರಕಟಿಸಿದೆ. ಇದರಿಂದಾಗಿ ಕನಿಮೋಳಿ ಗೆಲುವು ಮತ್ತಷ್ಟು ಕಷ್ಟವಾಗಿವೆ.

ತಮಿಳುನಾಡಿನಿಂದ ಆರು ರಾಜ್ಯಸಭಾ ಸ್ಥಾನಗಳಿಗೆ ಜೂ.27ರಂದು ಚುನಾವಣೆ ನಡೆಯಲಿದ್ದು, ಎಐಎಡಿಎಂಕೆಯ ನಾಲ್ವರು ಹಾಗೂ ಸಿಪಿಎಂನ ಒಬ್ಬರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಉಳಿದ ಒಂದು ಸ್ಥಾನಕ್ಕೆ ಡಿಎಂಕೆ ಹಾಗೂ ವಿಜಯ ಕಾಂತ್‌ರ ಡಿಎಂಡಿಕೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಗೆಲುವಿಗೆ 34 ಮತಗಳು ಬೇಕಾಗಿದ್ದು ಡಿಎಂಕೆ ಹಾಗೂ ಡಿಎಂಡಿಕೆ ಕ್ರಮವಾಗಿ 23 ಮತ್ತು 22 ಮತಗಳನ್ನು ಹೊಂದಿವೆ.

ಈಗಾಗಲೇ ನಾಲ್ಕು ಶಾಸಕರ ಬೆಂಬಲ ಗಿಟ್ಟಿರುವ ಡಿಎಂಕೆ, ಕಾಂಗ್ರೆಸ್‌ನ ಐವರು ಶಾಸಕರ ಬೆಂಬಲ ಪಡೆದು ಪಿಎಂಕೆಯ ಮೂವರು ಶಾಸಕರ ನೆರವಿನೊಂದಿಗೆ ಕನಿಮೋಳಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಉತ್ಸಾಹದಲ್ಲಿತ್ತು. ಆದರೆ ಪಿಎಂಕೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸುವುದರಿಂದ ಡಿಎಂಕೆ ಆಸೆಗೆ ಭಂಗವಾಗಿದೆ. ಕಾಂಗ್ರೆಸ್‌ ಮತ ಸೆಳೆಯಲು ಡಿಎಂಡಿಕೆ ಕೂಡ ಯತ್ನಿಸುತ್ತಿದ್ದು, ಕಾಂಗ್ರೆಸ್‌ ತನ್ನ ನಿಲುವು ಬಹಿರಂಗಪಡಿಸಿಲ್ಲ.

ವೆಬ್ದುನಿಯಾವನ್ನು ಓದಿ