ರಾಹುಲ್ ಗಾಂಧಿ ಚುನಾವಣೆ ಕಚೇರಿಯ ಉಸ್ತುವಾರಿ ವಹಿಸಿಕೊಂಡ ಪ್ರಿಯಾಂಕಾ.

ಗುರುವಾರ, 6 ಫೆಬ್ರವರಿ 2014 (18:01 IST)
PTI
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಲೋಕಸಭಾ ಚುನಾವಣಾ ಪ್ರಚಾರದ ವ್ಯವಹಾರದಲ್ಲಿ ಪ್ರಿಯಾಂಕಾ ವಾದ್ರಾ ಭಾಗಿಯಾಗುತ್ತಿರುವುದನ್ನು ನೋಡಿದಲ್ಲಿ ಚುನಾವಣೆ ಕಛೇರಿಯ ಉಸ್ತುವಾರಿಯನ್ನು ವಹಿಸಿಕೊಂಡಂತೆ ಭಾಸವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ತುಘಲಕ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ನಿವಾಸದಲ್ಲಿ ನಡೆಯುವ ಸಭೆಗಳಲ್ಲಿ ನಿಯಮಿತವಾಗಿ ಪ್ರಿಯಾಂಕಾ ಹಾಜರಾಗುತ್ತಿದ್ದು, ಯೋಜನೆಗಳಿಗೆ ಅಂತಿಮ ರೂಪ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವ ಸೋನಿಯಾ ಗಾಂಧಿ ಪುತ್ರಿ ತಡವಾಗಿಯಾದರೂ ರಾಹುಲ್‌ರ ಕಛೇರಿ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಈ ಮಹತ್ವದ ಬೆಳವಣಿಗೆ ಕಾಂಗ್ರೆಸ್ ಕೇಂದ್ರ ಕಾರ್ಯಾಲಯ ಮತ್ತು ಎಐಸಿಸಿ ಕಛೇರಿಯ ವಿವಿಧ ಹುದ್ದೆಗಳಲ್ಲಿರುವ ಟೆಕ್ಕಿಗಳು, ತಜ್ಞರು, ಸಿದ್ಧಾಂತಿಗಳು ಮತ್ತು ಯುವ ಉತ್ಸಾಹಿಗಳ ನಡುವಿನ ಎಲ್ಲ ಅಂತರಗಳನ್ನು ನಿವಾರಿಸಲಿದೆ ಎಂಬ ಸೂಚನೆಯನ್ನು ಕೊಡುತ್ತಿದೆ. ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಪಕ್ಷದ ಹಳೆಯ ಸಿಬ್ಬಂದಿ ಮತ್ತು ಹೊಸಬರ ಮಧ್ಯೆ ಸೇತುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ರಾಹುಲ್ ಗಾಂಧಿ ಟಿ ವಿ ಚಾನಲ್ ಒಂದಕ್ಕೆ ಪ್ರಥಮ ಬಾರಿ ಸಂದರ್ಶನ ನೀಡಿದ್ದು, ಆ ಸಮಯದಲ್ಲಿ ಸಂದರ್ಶನ ನಡೆದ ಜವಾಹರ ಭವನದಲ್ಲಿ ಪ್ರಿಯಾಂಕಾ ಉಪಸ್ಥಿತರಿದ್ದುದು, ರಾಹುಲ್ ಮಾಧ್ಯಮದ ಮುಂದೆ ತೆರೆದುಕೊಳ್ಳುವುದರಲ್ಲಿ ಅವರ ಪಾತ್ರವಿತ್ತು ಎಂಬುದನ್ನು ತೋರಿಸುತ್ತದೆ.

ಕಾಂಗ್ರೆಸ್ ನಾಯಕರ ಪ್ರಕಾರ ಪ್ರಿಯಾಂಕಾ ತನ್ನ ಸಹೋದರನನ್ನು ಅತಿಯಾಗಿ ಹಚ್ಚಿಕೊಂಡಿದ್ದು, ರಾಹುಲ್‌ರ ದಶಕದ ರಾಜಕೀಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಸಂಸತ್ತಿನಲ್ಲಿ ರಾಹುಲ್ ಭಾಷಣ, ಪಕ್ಷದ ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟ ಜೈಪುರದ ಚಿಂತನಾ ಗೋಷ್ಠಿ ಯಂತಹ ವಿಶೇಷ ಸಂದರ್ಭಗಳಲ್ಲೂ ಪ್ರಿಯಾಂಕಾ ಹಾಜರಿ ಇತ್ತು.

"2014ರ ಚುನಾವಣಾ ಅಭಿಯಾನದ ಉಸ್ತುವಾರಿಯನ್ನು ರಾಹುಲ್ ಜತೆ ನಿರ್ವಹಿಸುತ್ತಿರುವ ಪ್ರಿಯಾಂಕಾ ಪಕ್ಷದ ಮುಖವಾಗಿ ಬೆಳೆಯುತ್ತಿದ್ದಾರೆ. ಪಕ್ಷದ ದೊಡ್ಡ ದೊಡ್ಡ ಕಾರ್ಯಯೋಜನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಇಬ್ಬರು ಒಡಹುಟ್ಟಿದವರು ತುಂಬ ಪ್ರೀತಿಯಿಂದಿದ್ದಾರೆ ಮತ್ತು ಪಾರ್ಟಿಗೆ ಪ್ರಿಯಾಂಕಾ ಮೌಲ್ಯಯುತ ಬೆಂಬಲಿಗರಾಗಿದ್ದಾರೆ ಎಂದು ನಾಯಕರೊಬ್ಬರು ಹೇಳಿದ್ದಾರೆ

ವೆಬ್ದುನಿಯಾವನ್ನು ಓದಿ