ಸಕ್ಕರೆ ಬೆಳೆಗಾರರಿಗಾಗಿ ಬಟ್ಟೆ ಬಿಚ್ಚಿ ಪ್ರತಿಭಟಿಸಿದ ಶಾಸಕರು

ಬುಧವಾರ, 19 ಫೆಬ್ರವರಿ 2014 (15:51 IST)
PTI
ಉತ್ತರಪ್ರದೇಶದ ವಿಧಾನಸಭೆಯಲ್ಲಿ ತಮ್ಮ ಶರ್ಟ ಬಿಚ್ಚುವುದರ ಮೂಲಕ ಆರ್ ಎಲ್ ಡಿ ಪಕ್ಷದ ಶಾಸಕರಿಬ್ಬರು ಇಂದು ಪ್ರತಿಭಟನೆಗೆ ಇಳಿದಿದ್ದಾರೆ.

ರಾಜ್ಯಪಾಲ ಬಿಎಲ್ ಜೋಷಿ ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಲು ವಿಧಾನಸಭೆಗೆ ಬಂದಾಗ, ರಾಷ್ಟ್ರೀಯ ಲೋಕದಳ ಪಕ್ಷದ ಸುರೇಶ್ ಶರ್ಮಾ ಮತ್ತು ವೀರ್ ಪಾಲ್ ರಥಿ ಕುರ್ತಾವನ್ನು ಬಿಚ್ಚುವುದರ ಮೂಲಕ ಪ್ರತಿಭಟನೆಯನ್ನು ಪ್ರಾರಂಭಿಸಿದರು.

ನಂತರ ತಮ್ಮ ಮೇಜುಗಳನ್ನೇರಿದ ಶಾಸಕರು ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಬ್ಬು ಬೆಳೆಗಾರರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆಪಾದಿಸಿರುವ ಅವರು, ಕೃಷಿಕರ ಕಬ್ಬಿಗೆ ಉತ್ತಮ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ನೇತೃತ್ವದ ಆರ್ ಎಲ್ ಡಿ ಪಕ್ಷ ಎಂಟು ಶಾಸಕರನ್ನು ಹೊಂದಿದ್ದು, ಹೆಚ್ಚಿನವರು ರಾಜ್ಯದ ಪಶ್ಚಿಮ ಭಾಗವನ್ನು ಪ್ರತಿನಿಧಿಸುತ್ತಾರೆ.

ಬಹುಜನ ಸಮಾಜ ಪಕ್ಷದವರು ಸಹ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದರು.

ವೆಬ್ದುನಿಯಾವನ್ನು ಓದಿ