ಹತರಾದ ಪೊಲೀಸ್ ಪೇದೆಯ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ

ಮಂಗಳವಾರ, 31 ಡಿಸೆಂಬರ್ 2013 (12:50 IST)
PR
PR
ನವದೆಹಲಿ: ಕಳೆದ ವಾರ ಕರ್ತವ್ಯದಲ್ಲಿದ್ದಾಗ ಅಕ್ರಮ ಮದ್ಯತಯಾರಿಕೆ ದಂಧೆಯ ಜನರಿಂದ ಹತರಾದ ದೆಹಲಿ ಪೊಲೀಸ್ ಪೇದೆಯ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬರೋಬ್ಬರಿ ಒಂದು ಕೋಟಿ ಪರಿಹಾರವನ್ನು ನೀಡುವ ಮೂಲಕ ತಮ್ಮ ಹೃದಯವೈಶಾಲ್ಯತೆಯನ್ನು ಮೆರೆದಿದ್ದಾರೆ. ಸೋಮವಾರ ಅಸ್ವಸ್ಥತೆಯಿಂದ ಕೆಲಸಕ್ಕೆ ಹಾಜರಾಗದ ಕೇಜ್ರಿವಾಲ್, ಪೇದೆಯ ಪತ್ನಿಗೆ ಪತ್ರ ಬರೆದು, ತಾವು ಅಸ್ವಸ್ಥತೆಗೊಳಗಾದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಕ್ಷಮೆಯಾಚಿಸಿದರು.ನಿಮ್ಮ ಪತಿಯ ಹುತಾತ್ಮತೆಯನ್ನು ಗೌರವಿಸಿ, ಗೌರವದ ಸಂಕೇತವಾಗಿ ಒಂದು ಕೋಟಿ ರೂ. ನೀಡುತ್ತಿದ್ದೇವೆ.

ನಿಮ್ಮನ್ನು ಮತ್ತು ಕುಟುಂಬಕ್ಕೆ ಸಾಧ್ಯವಾದ ಎಲ್ಲ ರೀತಿಯಲ್ಲಿ ನೆರವಾಗಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಗಿಟೋರ್ನಿ ಗ್ರಾಮದಲ್ಲಿ ಅಕ್ರಮ ಮಧ್ಯದ ದಂಧೆಯ ಮೇಲೆ ದಾಳಿ ಸಂದರ್ಭದಲ್ಲಿ ಪೇದೆ ವಿನೋದ್ ಕುಮಾರ್‌ ಮೇಲೆ ಹಲ್ಲೆ ಮಾಡಿ ಹತ್ಯೆಮಾಡಲಾಗಿತ್ತು. 48 ವರ್ಷ ವಯಸ್ಸಿನ ಪೇದೆಯನ್ನು ಅಬ್ಕಾರಿ ಇಲಾಖೆಗೆ ನಿಯೋಜಿಸಲಾಗಿತ್ತು.
ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ

PR
PR
ದುಷ್ಕರ್ಮಿಗಳು ಹಾಕಿ ಸ್ಟಿಕ್‌ಗಳಿಂದ ಮತ್ತು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಪೇದೆ ಮೃತಪಟ್ಟರು ಮತ್ತು ಇನ್ನೊಬ್ಬ ಪೇದೆಗೆ ತೀವ್ರ ಗಾಯಗಳಾಗಿತ್ತು. ಪೊಲೀಸ್ ಪೇದೆ ಕರ್ತವ್ಯದಲ್ಲಿದ್ದಾಗ ಜೀವತೆತ್ತಿದ್ದಾರೆ. ವ್ಯವಸ್ಥೆಯಲ್ಲಿನ ದೋಷಗಳಿಂದ ಕಾನೂನು ರಕ್ಷಿಸುವ ಪೊಲೀಸ್ ಸಿಬ್ಬಂದಿ ಜೀವಕಳೆದುಕೊಂಡಿದ್ದು ದುರದೃಷ್ಟಕರ ಘಟನೆ . ಅವರ ಧೈರ್ಯ, ಶೌರ್ಯ ಮತ್ತು ಕರ್ತವ್ಯಪ್ರಜ್ಞೆಯನ್ನು ತಾವು ಮೆಚ್ಚುವುದಾಗಿ ಕೇಜ್ರಿವಾಲ್ ಹೇಳಿದರು.

ಆಮ್ ಆದ್ಮಿ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಮೃತಪಟ್ಟರೆ ಒಂದು ಕೋಟಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಈಗ ಪೊಲೀಸ್ ಪೇದೆ ಕುಟುಂಬಕ್ಕೆ ಒಂದು ಕೋಟಿ ಪರಿಹಾರವನ್ನು ಕೇಜ್ರಿವಾಲ್ ನೀಡಿದರು.

ವೆಬ್ದುನಿಯಾವನ್ನು ಓದಿ