ಅಣ್ಣಾ ಹಜಾರೆ ಖಾದಿಯೊಳಗೆ ಆರೆಸ್ಸೆಸ್ ನಿಕ್ಕರ್: ಮಲಿಕ್

ಮಂಗಳವಾರ, 18 ಅಕ್ಟೋಬರ್ 2011 (15:57 IST)
PTI
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕರೆದಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಮಹಾತ್ಮಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯಂತೆ ವರ್ತಿಸುತ್ತಿದ್ದಾರೆ. ಗಾಂಧಿಯ ಖಾದಿಯೊಳಗೆ ಆರೆಸ್ಸೆಸ್ ಚಡ್ಡಿಯನ್ನು ಧರಿಸಿದ್ದಾರೆ ಎಂದು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಕಿಡಿಕಾರಿದ್ದಾರೆ.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ 1998ರಲ್ಲಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿದಾಗ ನನ್ನ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ರಾಜಕೀಯ ಹಕ್ಕುಗಳ ಮರುಸ್ಥಾಪನೆಯ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಇದೀಗ ಅಣ್ಣಾ ಹಜಾರೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಎರಡು ದಿನಗಳ ಕಾಲ ನನ್ನ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಪುಲ್ವಾಮಾದ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದರು ಎಂದು ಮಲಿಕ್ ತಿಳಿಸಿದ್ದಾರೆ.

ಸಂವಿಧಾನದಡಿಯಲ್ಲಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶ್ರೀನಗರದಲ್ಲಿ ಅಣ್ಣಾ ಹಜಾರೆ ತಂಡದ ಸದಸ್ಯರು ಭರವಸೆ ನೀಡಿದ್ದಾರೆ ಎಂದು ಜೆಕೆಎಲ್‌ಎಫ್ ಮೂಲಗಳು ತಿಳಿಸಿವೆ.

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಕೂಡಾ ಶ್ರೀನಗರಕ್ಕೆ ಆಗಮಿಸಿದ್ದು ಸೇನೆಗೆ ವಿಶೇಷ ಅಧಿಕಾರ ನೀಡದಿರುವುದನ್ನು ವಿರೋಧಿಸುತ್ತಿರುವ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹುರಿಯತ್ ಕಾನ್ಫರೆನ್ಲ್ ಸದಸ್ಯ ಝಾಮ್ರೂದಾ ಹಬೀಬ್, ಸ್ವತಂತ್ರ ಶಾಸಕ ಅಬ್ದುಲ್ ರಷೀದ್, ಸಂದೀಪ್ ಪಾಂಡೆ ಮತ್ತು ಪರ್ವಿನಾ ಅಹಾಂಗರ್ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ

ಮಣಿಪುರದಲ್ಲಿ ಕಳೆದ 10 ವರ್ಷಗಳಿಂದ ನಿರಶನದಲ್ಲಿ ತೊಡಗಿರುವ ಐರೋಮ್ ಶರ್ಮಿಲಾ ಅವರಿಗೆ ಬೆಂಬಲ ನೀಡಲು ಯಾತ್ರೆಯನ್ನು ಆರಂಭಿಸಲಾಗುತ್ತಿದ್ದು 10 ರಾಜ್ಯಗಳಲ್ಲಿ ಸಂಚರಿಸಿ ಅಕ್ಟೋಬರ್ 27 ರಂದು ಐರೋಮ್ ದಾಖಲಾಗಿರುವ ಜವಾಹರ್ ಲಾಲ್ ನೆಹರು ಆಸ್ಪತ್ರೆಯ ಹೊರ ಆವರಣದಲ್ಲಿ ಅಂತ್ಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ