ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಶಿಕ್ಷೆಯಾಗಲಿ: ಜಯಾ

ಬುಧವಾರ, 2 ಜನವರಿ 2013 (12:56 IST)
PTI
ಮಹಿಳೆಯರ ಮೇಲಣ ಲೈಂಗಿಕ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಮಿಳುನಾಡು ಸರಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಹೊಸ ವರ್ಷದ ಸಂದೇಶದಲ್ಲಿ ಇವುಗಳನ್ನು ಪ್ರಕಟಿಸಿದರು. ಈ ನಡುವೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರನ್ನು ಗಲ್ಲಿಗೇರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿರುವ ಅವರು, ಅತ್ಯಾಚಾರಿಗಳ ಪುರುಷತ್ವ ಹರಣದ ಪ್ರಸ್ತಾವಕ್ಕೂ ತಮ್ಮ ಪೂರ್ಣ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಮೇಲಣ ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಇನ್ನಷ್ಟು ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿರುವ ಅವರು, ದಿಲ್ಲಿ ಮಾದರಿಯಲ್ಲಿ ಮಹಿಳೆಯರ ಮೇಲಣ ಅಪರಾಧ ಪ್ರಕರಣಗಳ ದಾಖಲಾತಿಗಾಗಿ ಪ್ರತ್ಯೇಕ ಮಹಿಳಾ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.

ಇದಲ್ಲದೆ ಮಹಿಳೆಯರ ಮೇಲೆ ಅಪರಾಧ ನಡೆಯುವ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸುವ ಜತೆಯಲ್ಲಿ ಮಹಿಳೆಯರ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಸಾದಾ ಉಡುಪುಗಳನ್ನು ಧರಿಸಿರುವ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಮಹಿಳೆಯರ ಮೇಲೆ ನಡೆಸಲಾಗುವ ಎಲ್ಲಾ ಲೈಂಗಿಕ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಇವುಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಲಾಗುವುದು. ಪ್ರತಿ ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಹಾಗೂ ವಲಯ ಪೊಲೀಸ್‌ ಮಹಾನಿರೀಕ್ಷಕರು ಮಹಿಳೆಯರ ಮೇಲಣ ಲೈಂಗಿಕ ಅಪರಾಧ ಪ್ರಕರಣಗಳ ಪರಿಶೀಲನೆ ನಡೆಸಲಿರುವರು. ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ಎಲ್ಲಾ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತಂತೆ ರಾಜ್ಯದ ಉನ್ನತ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಲಿರುವರು ಎಂದು ಜಯಲಲಿತಾ ಹೇಳಿದರು.

ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಾದವರ ವೈದ್ಯಕೀಯ ಹಾಗೂ ಇತರ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದವರು ತಿಳಿಸಿದರು.

ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಅತ್ಯಾಚಾರಿಗಳ ರಾಸಾಯನಿಕವಾಗಿ ಅವರ ಪುರುಷತ್ವ ಹರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಅತ್ಯಾಚಾರಿಗಳನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು ಎಂದವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ