ಅತ್ಯಾಚಾರ ಪ್ರಕರಣದ ಆರೋಪಿ ಆಸಾರಾಮ್ ಬಾಪು ಆಸ್ತಿ ಕೇವಲ 10 ಸಾವಿರ ಕೋಟಿಯಂತೆ

ಶುಕ್ರವಾರ, 31 ಜನವರಿ 2014 (15:32 IST)
PTI
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಕಂಬಿ ಎಣಿಸುತ್ತಿರುವ ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಅವರ ಆಸ್ತಿ 10 ಸಾವಿರ ಕೋಟಿ ರೂಪಾಯಿಗಳಾಗಿವೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆಸಾರಾಮ್ ಆಶ್ರಮದ ಮೇಲೆ ದಾಳಿ ನಡೆಸಿದಾಗ ಪತ್ತೆಯಾಗಿದ್ದ ಬ್ಯಾಂಕ್ ಖಾತೆ ವಿವರ, ಶೇರುಗಳು, ಸರಕಾರಿ ಬಾಂಡ್‌ಗಳು ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಅವರ ಆಸ್ತಿ 10 ಕೋಟಿ ರೂಪಾಯಿಗಳಷ್ಟಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನಾ ತಿಳಿಸಿದ್ದಾರೆ.

ದೇಶದ ಇತರ ಭಾಗಗಳಲ್ಲಿರುವ ಆಶ್ರಮಗಳ ಭೂಮಿಯ ಮೌಲ್ಯವನ್ನು ಸೇರಿಸಿಲ್ಲ. ಇನ್ನೂ ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸುತ್ತಿರುವುದರಿಂದ ಆಸಾರಾಮ್ ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ವಿವರಣೆ ನೀಡಿದ್ದಾರೆ.

ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿದಾಗ ಹಣಕಾಸಿವ ವಹಿವಾಟಿನ ದಾಖಲೆಗಳಿರುವ 40 ಬ್ಯಾಗ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ. ಆಸಾರಾಮ್ ಗುಜರಾತ್‌ನ 10 ಜಿಲ್ಲೆಗಳಲ್ಲಿ 45 ಸ್ಥಳಗಳಲ್ಲಿ ಸ್ವಂತ ಭೂಮಿ ಹೊಂದಿದ್ದಾರೆ ಎನ್ನಲಾಗಿದೆ.

ಇತರ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಎಂಟು ಜಿಲ್ಲೆಗಳಲ್ಲಿ ಸ್ವಂತ ಭೂಮಿ ಹೊಂದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ