ಅನಿಲ್ ಅಂಬಾನಿ ದಂಪತಿಗಳ ಸಾಕ್ಷ್ಯ ಕೇಳಿದ ಸಿಬಿಐ

ಶುಕ್ರವಾರ, 31 ಮೇ 2013 (15:42 IST)
PR
PR
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ರಿಲಯನ್ಸ್ ಎಡಿಎ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಅವರ ಪತ್ನಿ ಟೀನಾ ಅಂಬಾನಿ ಸೇರಿದಂತೆ ಸುಮಾರು 17 ಸರ್ಕಾರಿ ಸಾಕ್ಷಿಗಳನ್ನು ವಿಚಾರಣೆಗೆ ಕರೆಸುವಂತೆ ಸಿಬಿಐ ಸಲ್ಲಿಸಿರುವ ಅರ್ಜಿ ಬಗ್ಗೆ ಜುಲೈ 3ರಂದು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸುವಂತೆ ಸೂಚಿಸಿ ಎಲ್ಲ ಆರೋಪಿಗಳಿಗೂ ವಿಶೇಷ ನ್ಯಾಯಾಲಯ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಹಗರಣದ ಸತ್ಯಾಂಶವನ್ನು ತಿಳಿಯಬೇಕಾದರೆ ಈ ಎಲ್ಲ ಸರ್ಕಾರಿ ಸಾಕ್ಷಿಗಳ ಸಾಕ್ಷ್ಯವನ್ನು ದಾಖಲಿಸುವುದು ಅವಶ್ಯಕ ಎಂದು ವಿಶೇಷ ಸರ್ಕಾರಿ ವಕೀಲ ಯು.ಯು. ಲಲಿತ್ ಅವರು ನ್ಯಾಯಪೀಠಕ್ಕೆ ತಿಳಿಸಿದ ನಂತರ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದರು.

ದೂರಸಂಪರ್ಕ ಇಲಾಖೆಯ ಅಧಿಕಾರಿ ನಿತಿನ್ ಜೈನ್ ಅವರನ್ನು ಮತ್ತೆ ಸಾಕ್ಷಿ ಹೇಳಲು ಕರೆಸಬೇಕು ಎಂಬ ಸಿಬಿಐ ಕೋರಿಕೆಯ ಬಗ್ಗೆ ಜುಲೈ 3ರಂದು ನಿರ್ಧರಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.

ಅನಿಲ್ ಅಂಬಾನಿ, ಟೀನಾ ಅಂಬಾನಿ ಅಲ್ಲದೆ ಟ್ರಾಯ್‌ನ ಮಾಜಿ ಸಲಹೆಗಾರರು, ಬ್ಯಾಂಕ್ ಅಧಿಕಾರಿಗಳನ್ನು ಸಾಕ್ಷಿ ಹೇಳಲು ಕರೆಯಿಸಬೇಕು ಎಂದು ಲಲಿತ್ ಕೋರಿದ್ದಾರೆ. ರಿಲಯನ್ಸ್ ಎಡಿಎಜಿ ಕಂಪೆನಿಯ ಹಿರಿಯ ಅಧಿಕಾರಿಗಳಾದ ಗೌತಮ್ ದೋಶಿ, ಸುರೇಂದ್ರ ಪಿಪರಾ ಮತ್ತು ಹರಿ ನಾಯರ್ ಅವರನ್ನು ಆಪಾದಿತರನ್ನಾಗಿ ಮಾಡಲಾಗಿರುವುದರಿಂದ ಅಂಬಾನಿ ದಂಪತಿ ಸಾಕ್ಷಿ ಮಹತ್ವ ಪಡೆದಿದೆ.

ವೆಬ್ದುನಿಯಾವನ್ನು ಓದಿ