ಅಮೇಥಿಯಿಂದ ಸ್ಮೃತಿ ಇರಾನಿ ಮತ್ತು ರಾಯಬರೇಲಿಯಿಂದ ಉಮಾಭಾರತಿ ಕಣಕ್ಕೆ!

ಸೋಮವಾರ, 31 ಮಾರ್ಚ್ 2014 (11:35 IST)
PTI
ಭಾರತೀಯ ಜನತಾ ಪಕ್ಷದ ಚುನಾವಣಾ ಸಮಿತಿಯ ಮೂಲಗಳ ಅನುಸಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಥಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಲಿದೆ. ಅಲ್ಲದೇ ಸೋನಿಯಾ ವಿರುದ್ಧ ವರಿಷ್ಠ ನಾಯಕಿ ಉಮಾಭಾರತಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಮಾಭಾರತಿ ಝಾಂಸಿ ಜತೆಗೆ ರಾಯ್‌ಬರೇಲಿಯಿಂದ ಕೂಡ ಕಣಕ್ಕಿಳಿಯಲಿದ್ದಾರೆ. ಅವರು 2 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ತೀರ್ಮಾನ ಕೈಗೊಂಡಿದೆ. ಶೀಘೃದಲ್ಲೇ ಈ ಕುರಿತು ಘೋಷಣೆಯಾಗಲಿದೆ. ಉಮಾಭಾರತಿ ರಾಯ್‌ಬರೇಲಿಯಿಂದ ಕಣಕ್ಕಿಳಿಯುವುದು ಖಚಿತವಾದರೆ, ಕಾಂಗ್ರೆಸ್ ಅಧ್ಯಕ್ಷೆ ಕಠಿಣವಾದ ಸವಾಲನ್ನು ಎದುರಿಸಲಿದ್ದಾರೆ.

ಮೂಲಗಳ ಪ್ರಕಾರ ಬಿಜೆಪಿ ತನ್ನ ಇಚ್ಛೆಯನ್ನು ಸ್ಮೃತಿ ಇರಾನಿಗೆ ತಿಳಿಸಿದೆ.ಅವರ ಉಮೇದುವಾರಿಕೆ ಪ್ರಕಟಣೆಯಷ್ಟೇ ಬಾಕಿ ಇದೆ. ಅವರು ಅಮೇಥಿಯಿಂದ ಕಣಕ್ಕಿಳಿದರೆ ಸಂಘರ್ಷ ಸಾಕಷ್ಟು ಕುತೂಹಲಕ್ಕೆ ಕಾರಣವಾಗಲಿದೆ. ಬಿಜೆಪಿ ಉಪಾಧ್ಯಕ್ಷೆಯಾಗಿರುವ ಸ್ಮೃತಿ ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಅಮೇಥಿಯಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯಲ್ಲದೇ, ಆಪ್ ನಾಯಕ ಕುಮಾರ್ ಬಿಸ್ವಾಸ್ ಕೂಡ ಸ್ಪರ್ಧಿಸುತ್ತಿದ್ದಾರೆ.ಇಂತಹದರಲ್ಲಿ ಸ್ಮೃತಿ ಇರಾನಿ ಕೂಡ ಸ್ಪರ್ಧಿಸುತ್ತಿದ್ದಾರೆ ಎಂದರೆ ಭರ್ಜರಿ ಸಂಘರ್ಷ ನಡೆಯಲಿದ್ದು, ಊಹೆಗೆ ನಿಲುಕದ ಫಲಿತಾಂಶ ಬರಬಹುದು ಎಂದು ಹೇಳಲಾಗುತ್ತಿದೆ.

ಸೋನಿಯಾಗೆ ಸೋಲುಣಿಸ ಬೇಕಾದರೆ ಅವರ ವಿರುದ್ಧ ಉಮಾ ಭಾರತಿಯನ್ನು ಕಣಕ್ಕಿಳಿಸಬೇಕು ಎಂದು ಬಾಬಾ ರಾಮದೇವ ಕೂಡ ಹೇಳಿದ್ದರು.

ವೆಬ್ದುನಿಯಾವನ್ನು ಓದಿ