ಅರವಿಂದ್ ಕೇಜ್ರಿವಾಲ್‌ಗೆ ಜೈ ಎಂದು ಅಮಾನತ್ತುಗೊಂಡ ಪೊಲೀಸ್ ಪೇದೆ

ಸೋಮವಾರ, 30 ಡಿಸೆಂಬರ್ 2013 (16:43 IST)
PTI
ದೆಹಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬ ಬ್ಯಾರಿಕೇಡ್‌ ಹತ್ತಿ ಕೇಜ್ರಿವಾಲ್‌ಗೆ ಜೈ ಎಂದು ಘೋಷಣೆ ಕೂಗಿದ್ದರಿಂದ ಅಮಾನತ್ತುಗೊಂಡಿದ್ದಾನೆ.

ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಭದ್ರತೆಗಾಗಿ ನಿಯೋಜಿಸಲಾಗಿದ್ದ ದೆಹಲಿ ಸಶಸ್ತ್ರಪಡೆಯ ಪೇದೆ ರಾಜೇಶ್ ಕುಮಾರ್ ಕೇಜ್ರಿವಾಲ್ ಪರ ಘೋಷಣೆ ಕೂಗಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕರ್ತವ್ಯವನ್ನು ನಿರ್ವಹಿಸುವುದನ್ನು ಬಿಟ್ಟು ರಾಜೇಶ್ ಕುಮಾರ್ ಕೇಜ್ರಿವಾಲ್ ಪರ ಘೋಷಣೆ ಕೂಗುವುದಲ್ಲದೇ ದೆಹಲಿ ಪೊಲೀಸ್ ಇಲಾಖೆಯನ್ನು ಕೇಂದ್ರ ಗೃಹ ಸಚಿವಾಲಯದಿಂದ ಕೇಜ್ರಿವಾಲ್ ಸರಕಾರದ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಕೂಡಾ ಒತ್ತಾಯಿಸುತ್ತಿದ್ದನು.

ಪೊಲೀಸ್ ಬ್ಯಾರಿಕೇಡ್ ಹತ್ತಿ ಘೋಷಣೆಗಳನ್ನು ಕೂಗುತ್ತಿದ್ದ ರಾಜೇಶ್‌ನನ್ನು ಇತರ ಸಹದ್ಯೋಗಿಗಳು ಬಂಲವಂತವಾಗಿ ಕೆಳಗಿಳಿಸಿ, ಹಿರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಕರ್ತವ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪೇದೆಯನ್ನು ಅಮಾನತ್ತುಗೊಳಿಸಲಾಗಿದೆ.

ಅಮಾನತ್ತುಗೊಂಡ ರಾಜೇಶ್ ಕುಮಾರ್ ಮೂಲತಃ ರಾಜಸ್ಥಾನದವನು. ಕಳೆದ 2010ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ. ಪೊಲೀಸ್ ಸಮವಸ್ತ್ರದಲ್ಲಿರುವಾಗ ಘೋಷಣೆಗಳನ್ನು ಕೂಗಿ ಅಶಿಸ್ತು ತೋರಿದ್ದರಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ