ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದಲ್ಲಿ ಜೆಡಿಯು ಬೆಂಬಲ: ನಿತೀಶ್ ಕುಮಾರ್

ಸೋಮವಾರ, 9 ಡಿಸೆಂಬರ್ 2013 (15:32 IST)
PTI
ದೆಹಲಿ ರಾಜ್ಯದ ಅತಂತ್ರ ವಿಧಾನಸಭೆಯಿಂದಾಗಿ ಸರಕಾರ ರಚನೆಗೆ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿವೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದಲ್ಲಿ ಬೇಷರತ್ತಾಗಿ ಬೆಂಬಲ ನೀಡುವುದಾಗಿ ಜೆಡಿ (ಯು) ಘೋಷಿಸಿದೆ.

ಅತಂತ್ರ ವಿಧಾನಸಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಜೆಡಿಯು ನಾಯಕ ಕೆ.ಸಿ.ತ್ಯಾಗಿ, ಕೇಜ್ರಿವಾಲ್ ಮುಖ್ಯಮಂತ್ರಿಯಾಗಲಿ ಎನ್ನುವುದೇ ನಮ್ಮ ಬಯಕೆ. ಅವರಿಗೆ ಸಂಪೂರ್ಣ ಬೆಂಬಲ ನೀಡಲು ಜೆಡಿಯು ಸಿದ್ದವಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ದೆಹಲಿ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ವಿರುದ್ಧವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಮತದಾರರು ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಿ ಎರಡು ಪಕ್ಷಗಳಿಗೆ ಆಘಾತ ನೀಡಿದ್ದಾರೆ ಎಂದರು.

ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಅಲೆಯಿಲ್ಲ. ಮೋದಿ ಪರ ಅಲೆಯಿದ್ದಲ್ಲಿ ಬಿಜೆಪಿ ಬಹುಮತ ಪಡೆಯಬೇಕಾಗಿತ್ತು. ಮೋದಿ ಅಲೆ ಕೇವಲ ನೀರಿನ ಮೇಲಿರುವ ಗುಳ್ಳೆಯಂತೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ