ಅವಿವಾಹಿತೆಯರು ಮೊಬೈಲ್ ಬಳಕೆಗೆ ನಿಷೇಧ: ಬಿಹಾರ್ ಪಂಚಾಯಿತಿ ಆದೇಶ

ಗುರುವಾರ, 26 ಡಿಸೆಂಬರ್ 2013 (15:36 IST)
PR
ವಿವಾಹವಾಗದ ಯುವತಿಯರು ಮೊಬೈಲ್ ಬಳಸುವುದನ್ನು ನಿಷೇಧಿಸಿ ಬಿಹಾರ್‌ನ ಗ್ರಾಮಪಂಚಾಯಿತಿ ಆದೇಶ ಹೊರಡಿಸಿದೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

ಬಿಹಾರ್‌ನ ಪಶ್ಚಿಮ ಚಂಪಾರಣ್ಯ ಜಿಲ್ಲೆಯಲ್ಲಿರುವ ಸೋಮಗಢ್ ಗ್ರಾಮ ಪಂಚಾಯಿತಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಅವಿವಾಹಿತ ಯುವತಿಯರು ಮೊಬೈಲ್ ಬಳಕೆ ನಿಷೇಧಿಸಿ ಫರ್ಮಾನ್ ಹೊರಡಿಸಲಾಗಿದೆ.

ಒಂದು ವೇಳೆ ಅವಿವಾಹಿತ ಯುವತಿಯರು ಪಂಚಾಯಿತಿ ಆದೇಶವನ್ನು ಉಲ್ಲಂಘಿಸಿ ಮೊಬೈಲ್ ಬಳಕೆ ಮಾಡಿದಲ್ಲಿ ಅಂತಹ ಕುಟುಂಬಗಳಿಗೆ ಭಾರಿ ದಂಡ ವಿಧಿಸುವುದರೊಂದಿಗೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತಹ ತೀರ್ಪು ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅನ್ಸಾರಿ ತಿಳಿಸಿದ್ದಾರೆ.

ಏತನ್ಮಧ್ಯೆ, ಬಿಹಾರ್‌ನ ಪಂಚಾಯತಿ ರಾಜ್ ಖಾತೆ ಸಚಿವರಾದ ಭೀಮ್ ಸಿಂಗ್ ಮಾತನಾಡಿ, ಪಂಚಾಯಿತಿಗಳಿಗೆ ಇಂತಹ ತೀರ್ಪು ನೀಡುವ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ಗ್ರಾಮಸ್ಥರು ದೂರು ನೀಡಿದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿಹಾರ್‌ ರಾಜ್ಯದಲ್ಲಿ ಇಂತಹ ತೀರ್ಪುಗಳು ಹೊರಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ಪಂಚಾಯತಿಯೊಂದು ನಿಷೇಧ ಹೇರಿದ್ದಲ್ಲದೇ ವಿದ್ಯಾರ್ಥಿನಿಯರು ಆಧುನಿಕ ಡ್ರೆಸ್‌ಗಳನ್ನು ಹಾಕಬಾರದು ಎಂದು ಆದೇಶ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ