ಆಂಧ್ರ ಸದನದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಶಾಸಕರು

ಸೋಮವಾರ, 16 ಡಿಸೆಂಬರ್ 2013 (11:32 IST)
PR
PR
ಹೈದರಾಬಾದ್: ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರಚಿಸುವ ತೆಲಂಗಾಣ ಮಸೂದೆಯನ್ನು ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ತೀವ್ರ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆ ಮಂಡಿಸಲಾಯಿತು. ತೆಲಂಗಾಣ ಪ್ರದೇಶದ ಶಾಸಕರು ಮಸೂದೆಯನ್ನು ತಕ್ಷಣವೇ ಚರ್ಚೆಗೆ ಎತ್ತಿಕೊಂಡು ಮುಂದಿನ ಪ್ರಕ್ರಿಯೆಗಾಗಿ ರಾಷ್ಟ್ರಪತಿಗೆ ಕಳಿಸಬೇಕೆಂದು ಆಗ್ರಹಿಸಿದರು. ಆದರೆ ಸೀಮಾಂಧ್ರ ಪ್ರದೇಶದ ಶಾಸಕರು ಮಸೂದೆಯನ್ನು ಜನವರಿಯಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕೆಂದು ಒತ್ತಾಯಿಸಿದರು. ಈ ಮಸೂದೆಯನ್ನು ಆಂಧ್ರ ವಿಧಾನಸಭೆಗೆ ಅಭಿಪ್ರಾಯ ಸಂಗ್ರಹಕ್ಕಾಗಿ ಮಾತ್ರ ಕಳಿಸಲಾಗಿತ್ತೇ ವಿನಃ ಮತದಾನದ ಉದ್ದೇಶದಿಂದ ಕಳಿಸಿರಲಿಲ್ಲ.

ಜನವರಿ 23ರೊಳಗೆ ರಾಷ್ಟ್ರಪತಿಗೆ ಅದನ್ನು ಹಿಂತಿರುಗಿಸಬೇಕಿದೆ. ಸೀಮಾಂಧ್ರದ ಶಾಸಕರು ರಾಜ್ಯದ ವಿಭಜನೆಗೆ ವಿರೋಧಿಸಿದ್ದು, ಈ ಪ್ರಕ್ರಿಯೆ ವಿಳಂಬಿಸುವ ಮೂಲಕ ಸಂಸತ್ತು ಸಾರ್ವತ್ರಿಕ ಚುನಾವಣೆಗೆ ಮುನ್ನ ಮಸೂದೆ ಕೈಗೆತ್ತಿಕೊಳ್ಳದಂತೆ ಖಾತರಿಗೆ ಬಯಸಿದ್ದರು. ಟಿಡಿಪಿ, ಕಾಂಗ್ರೆಸ್ ಶಾಸಕರು ವಾಗ್ವಾದಕ್ಕಿಳಿದು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು.

ಮಸೂದೆಯನ್ನು ಮಂಡನೆ ಮಾಡಲು ಕಾರ್ಯದರ್ಶಿಗಳು ಆರಂಭಿಸುತ್ತಿದ್ದಂತೆ ಟಿಡಿಪಿ ಸದನದಿಂದ ಹೊರಕ್ಕೆ ಬಂದಿತು ಮತ್ತು ಟಿಡಿಪಿ ಶಾಸಕರೊಬ್ಬರು ಕರಡು ಪ್ರತಿಯನ್ನು ಹರಿದುಹಾಕಿದರು. ಆಗ ತೆಲಂಗಾಣ ಮತ್ತು ಟಿಡಿಪಿ ಶಾಸಕರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತವನ್ನು ತಲುಪಿದರು. ತೀವ್ರ ಗದ್ದಲ, ಘೋಷಣೆಗಳು ಸದನದಲ್ಲಿ ಮೊಳಗಿದವು.

ವೆಬ್ದುನಿಯಾವನ್ನು ಓದಿ