ಆದರ್ಶ ಹಗರಣ-ಸಿಬಿಐ,ಇ.ಡಿ.ಗೆ ಬೆವರಿಳಿಸಿದ ಹೈಕೋರ್ಟ್ ಜಡ್ಜ್

ಮಂಗಳವಾರ, 28 ಫೆಬ್ರವರಿ 2012 (18:58 IST)
PR
ಆದರ್ಶ ಹಗರಣದ ತನಿಖೆಯನ್ನು ನಿಧಾನಗತಿಯಲ್ಲಿ ನಡೆಸುತ್ತಿರುವ ಸಿಬಿಐ ಮತ್ತು ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ ಅನ್ನು ಮುಂಬೈ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ನಿಮಗೆ ಸಾಧ್ಯವಾಗದಿದ್ರೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸುವುದಾಗಿ ಎಚ್ಚರಿಕೆ ನೀಡಿದೆ.

ಕೋಟ್ಯಂತರ ರೂಪಾಯಿ ಹಗರಣದ ಆದರ್ಶ್ ಹೌಸಿಂಗ್ ಸೊಸೈಟಿ ಸದಸ್ಯರ ವಿರುದ್ಧ ತನಿಖೆ ನಡೆಸುತ್ತಿರುವ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ ಕಾರ್ಯವೈಖರಿ ನಿಜಕ್ಕೂ ಸಮಾಧಾನ ತಂದಿಲ್ಲ ಎಂದು ಕೋರ್ಟ್ ಕಿಡಿಕಾರಿದೆ. ಇದೊಂದು ಗಂಭೀರವಾದ ಲೋಪ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

ಆದರ್ಶ ಪ್ರಕರಣದ ತನಿಖೆ ವಿಷಯದಲ್ಲಿ ಇಡಿ(ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್) ಮೂಕ ಪ್ರೇಕ್ಷಕನಂತಿರುವುದು ದುರದೃಷ್ಟಕರ ಎಂದು ಕೋರ್ಟ್ ಅಸಮಾಧಾನವ್ಯಕ್ತಪಡಿಸಿದ್ದು, ಹಣ ದುರುಪಯೋಗ ಆರೋಪದ ಈ ಪ್ರಕರಣದ ತನಿಖೆಯನ್ನು ನಡೆಸದಿರುವುದು ನಿಜಕ್ಕೂ ಏಜೆನ್ಸಿಯ ಗುರುತರವಾದ ಲೋಪವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಇಡಿ ಒಂದಿಂಚೂ ಮುಂದುವರಿದಿಲ್ಲ. ಇದರಿಂದ ನೀವು ಏನು ಸಾಧಿಸಿದಂತಾಗಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಪಿ.ಬಿ.ಮಜುಂದಾರ್ ಮತ್ತು ಆರ್.ಡಿ.ಧಾನುಕಾ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್‌ಗೆ ಬೆವರಿಳಿಸಿದ್ದಾರೆ.

ನೀವು ಸಿಬಿಐ ಮೇಲೆ ಯಾಕೆ ಅವಲಂಬಿತರಾಗಿದ್ದೀರಾ? ನಿಮ್ಮದು ಪ್ರತ್ಯೇಕ ಏಜೆನ್ಸಿ. ಹಾಗಾಗಿ ನೀವು ಸ್ವತಂತ್ರವಾಗಿಯೇ ತನಿಖೆ ನಡೆಸಬೇಕು ಎಂದು ನ್ಯಾ.ಮಜುಂದಾರ್ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಇಡಿ ವಕೀಲರು ಸಿಬಿಐ ತನಿಖೆ ನಡೆಸುತ್ತಿದ್ದು, ಇಡಿ ತನಿಖೆ ನಡೆಸುತ್ತಿಲ್ಲ ಎಂದಾಗ ನ್ಯಾಯಾಧೀಶರು ಈ ರೀತಿ ತರಾಟೆಗೆ ತೆಗೆದುಕೊಂಡರು.

ಅಲ್ಲದೇ ಸಿಬಿಐ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ ನ್ಯಾಯಾಧೀಶರು, ಆದರ್ಶ ಸೊಸೈಟಿಯ ಎಲ್ಲಾ ಸದಸ್ಯರ ಸ್ಟೇಟಸ್ ವರದಿಯನ್ನು ಮಾರ್ಚ್ 12ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐಗೆ ತಾಕೀತು ಮಾಡಿದರು.

ವೆಬ್ದುನಿಯಾವನ್ನು ಓದಿ