ಆಮ್ ಆದ್ಮಿ ಪಕ್ಷದ ಸದಸ್ಯರು ಸುನಾಮಿಯಲ್ಲಿ ಒಂದಾದ ಪ್ರಾಣಿಗಳಂತೆ: ಬಿಜೆಪಿ

ಶನಿವಾರ, 21 ಡಿಸೆಂಬರ್ 2013 (18:06 IST)
PTI
ಆಮ್ ಆದ್ಮಿ ಪಕ್ಷದ ಮುಖಂಡರ ಕಾರ್ಯವೈಖರಿ ಸಂವಿಧಾನ ವಿರೋಧಿಯಾಗಿದೆ. ಆಮ್ ಆದ್ಮಿ ಪಕ್ಷದ ಸದಸ್ಯರು ಸುನಾಮಿ ಹೊಡೆತಕ್ಕೆ ಸಿಲುಕಿ ಒಂದಾದ ಪ್ರಾಣಿಗಳಂತೆ ಎಂದು ಬಿಜೆಪಿ ಮುಖಂಡ ವಿಜಯ್ ಕುಮಾರ್ ಮಲ್ಹೋತ್ರಾ ಲೇವಡಿ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ವಿದ್ಯುತ್ ಬಿಲ್ ಪಾವತಿಸದಂತೆ ಜನತೆಗೆ ಹೇಗೆ ಒತ್ತಾಯಿಸುತ್ತಾರೆ? ಇದು ಪ್ರತಿಭಟನೆ ತೋರುವ ರೀತಿಯಲ್ಲ. ಆಪ್ ಪಕ್ಷದ ಕಾರ್ಯಕರ್ತರಿಗೆ ಪ್ರಜಾಪ್ರಭುತ್ವ ಅಥವಾ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಇಂತಹ ಪಕ್ಷ ಹೇಗೆ ಸರಕಾರ ಮುನ್ನಡೆಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡರಲ್ಲಿ ಒಬ್ಬರಿಗೂ ರಾಜಕೀಯದ ಅನುಭವವಿಲ್ಲ. ಅವರು ಕೇವಲ ಸುನಾಮಿಯಲ್ಲಿ ಒಂದಾದ ಪ್ರಾಣಿಗಳಂತೆ ಎಂದು ವ್ಯಂಗ್ಯವಾಡಿದ್ದಾರೆ.

ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲ ಎಂದು ಚುನಾವಣೆಗೆ ಮುನ್ನ ಘೋಷಿಸಿದ್ದ ಕೇಜ್ರಿವಾಲ್, ಇದೀಗ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರಕಾರ ರಚಿಸುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದಾರೆ.

ಆಮ್ ಆದ್ಮಿ ಪಕ್ಷ ಹೀನಾಯವಾಗಿ ಟೀಕಿಸಿದ್ದರೂ ಕಾಂಗ್ರೆಸ್ ಪಕ್ಷ ಬೆಂಬಲ ನೀಡಲು ನಿರ್ಧರಿಸಿರುವುದು ಪಕ್ಷದ ಸಿದ್ದಾಂತಗಳನ್ನು ಎತ್ತಿ ತೋರಿಸುತ್ತದೆ ಎಂದರು.

ಆಮ್ ಆದ್ಮಿ ಪಕ್ಷದ ಸದಸ್ಯರು ಮಾವೋವಾದಿಗಳಂತೆ ಎಂದು ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದ ಒಂದು ದಿನದ ನಂತರ ವಿಜಯ್ ಮಲ್ಹೋತ್ರಾ ಹೇಳಿಕೆ ಹೊರಬಿದ್ದಿದೆ.

ವೆಬ್ದುನಿಯಾವನ್ನು ಓದಿ