ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಬೆಂಬಲ ಪಡೆದು ಜನತೆಯನ್ನು ವಂಚಿಸಿದೆ: ಬಿಜೆಪಿ

ಸೋಮವಾರ, 23 ಡಿಸೆಂಬರ್ 2013 (15:29 IST)
PTI
ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲ ಪಡೆದು ಸರಕಾರ ರಚಿಸಲು ಹೊರಟಿದ್ದು ಜನತೆಯನ್ನು ವಂಚಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರಕಾರ ರಚಿಸಲು ಹೊರಡಿರುವ ಆಮ್ ಆದ್ಮಿ ಪಕ್ಷದ ಮುಖಂಡರು ಅಧಿಕಾರಕ್ಕಾಗಿ ಯಾವ ರೀತಿ ಹಪಾಹಪಿ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಆರೋಪಿಸಿದ್ದಾರೆ.

ಯಾವುದೇ ಕಾರಣಕ್ಕೂ ಇತರ ರಾಜಕೀಯ ಪಕ್ಷಗಳ ಬೆಂಬಲ ಪಡೆಯುವುದಿಲ್ಲ ಎಂದು ಘೋಷಿಸಿದ್ದ ಆಮ್ ಆದ್ಮಿ ಪಕ್ಷದ ಮುಖಂಡರು, ಭ್ರಷ್ಟಾಚಾರ ತುಂಬಿತುಳುಕುತ್ತಿರುವ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರಕಾರ ರಚಿಸುತ್ತಿದೆ ಎಂದು ಲೇವಡಿ ಮಾಡಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 31 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತದ ಕೊರತೆ ಎದುರಾಗಿತ್ತು. ಆಪ್ ಪಕ್ಷ 28 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್ ಪಕ್ಷ ಕೇವಲ 8 ಸ್ಥಾನಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದಿತ್ತು.

ಆಮ್ ಆದ್ಮಿ ಪಕ್ಷ ಕೇವಲ ನೂರಾರು ಜನರ ಅಭಿಮತ ಪಡೆದು ಸರಕಾರ ರಚಿಸಲು ಸಿದ್ದವಾಗಿದೆ. ಕೆಲವೇ ಜನರ ಅನಿಸಿಕೆಗಳು ಲಕ್ಷಾಂತರ ಮತದಾರರ ಅನಿಸಿಕೆಯಾಗುವುದಿಲ್ಲ ಎಂದು ಬಿಜೆಪಿ ಮುಖಂಡ ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ