ಇಕ್ಕಟ್ಟಿಗೆ ಸಿಲುಕಿದ ಪ್ರಯಾಣಿಕರಿಗೆ ಅಳಗಿರಿ, ಮಮತಾ ಸಹಾಯ

ಭಾನುವಾರ, 31 ಮೇ 2009 (17:10 IST)
ಕೇಂದ್ರದ ನೂತನ ಸಚಿವ ಎಂ.ಕೆ. ಅಳಗಿರಿ ಅವರು ದೆಹಲಿ ವಿಮಾನನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ 49 ಪ್ರಯಾಣಿಕರು ಚೆನ್ನೈಗೆ ತಲುಪುವಂತೆ ಸಹಾಯ ಮಾಡಿರುವ ಕುರಿತು ವರದಿಯಾಗಿದೆ.

ಈ ಪ್ರಯಾಣಿಕರು ದೆಹಲಿ ಮೂಲಕವಾಗಿ ಶ್ರೀನಗರದಿಂದ ಚೆನ್ನೈಗೆ ಸಾಗುತ್ತಿದ್ದರು. ಆದರೆ ವಿಮಾನ ವಿಳಂಬವಾಗಿ ಹೊರಟಿದ್ದ ಕಾರಣ ದೆಹಲಿಯಲ್ಲಿ ಅವರು ಸಂಪರ್ಕ ವಿಮಾನ ತಪ್ಪಿಸಿಕೊಂಡಿದ್ದರು. ಇವರು ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸಿದ್ದು, ಏರ್‌ಲೈನ್ಸ್ ಇವರಿಗೆ ಉಳಕೊಳ್ಳಲು ಅಥವಾ ಚೆನ್ನೈಗೆ ತಲುಪಲು ಬದಲೀ ವಿಮಾನದ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕಿದ್ದರು.

ಅಳಗಿರಿ ಅವರು ಈ ಪ್ರಯಾಣಿಕರ ಕುರಿತು ವಿಚಾರಿಸಿದಾಗ, ಪ್ರಯಾಣಿಕರು ತಮಗೆ ಚೆನ್ನೈ ತಲುಪಲು ಯಾವುದೇ ವಿಮಾನ ಇಲ್ಲವೇ ರೈಲಿನಲ್ಲಿ ಸೀಟು ಸಿಕ್ಕಿಲ್ಲ ಎಂದು ತಮ್ಮ ಸಮಸ್ಯೆಯನ್ನು ವಿವರಿಸಿ, ಸಚಿವರ ಸಹಾಯ ಯಾಚಿಸಿದ್ದರು.

ಅಳಗಿರಿ ಅವರು ತಕ್ಷಣವೇ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರಿಗೆ ಈ ಪ್ರಯಾಣಿಕರ ಪರಿಸ್ಥಿತಿಯ ಕುರಿತು ತಿಳಿಸಿ, ಜಿಟಿ ಎಕ್ಸ್‌ಪ್ರೆಸ್ ಅಥವಾ ಇನ್ಯಾವುದಾದರೂ ದೆಹಲಿಯಿಂದ ಹೊರಡುವ ರೈಲಿನಲ್ಲಿ ಈ ಪ್ರಯಾಣಿಕರಿಗೆ ವ್ಯವಸ್ಥೆ ಮಾಡುವಂತೆ ಕೋರಿದ್ದರು ಎಂದು ಅಳಗಿರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಳಗಿರಿಯವರ ಮನವಿಗೆ ಕೂಡಲೇ ಸ್ಪಂದಿಸಿರುವ ಮಮತಾ, ಅವರು ಈ ಪ್ರಯಾಣಿಕರು ಭಾನುವಾರ ಜಿಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ