ಇಸ್ರೋಗೆ ಮತ್ತೊಂದು ಗರಿ: 3 ಉಪಗ್ರಹಗಳು ಕಕ್ಷೆಗೆ

ಬುಧವಾರ, 20 ಏಪ್ರಿಲ್ 2011 (12:41 IST)
ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನ ಮತ್ತು ನಿರ್ವಹಣೆಗೆ ಸಹಕಾರಿಯಾಗಲಿರುವ ರಿಸೋರ್ಸ್‌ ಸ್ಯಾಟ್‌ ಸಹಿತ 3 ಉಪಗ್ರಹಗಳನ್ನು ಪಿಎಸಲ್‌ವಿ ಸಿ 16 ಬುಧವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವುದರೊಂದಿಗೆ, ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.

ಇಸ್ರೋ ನಿರ್ಮಿತ ಪಿಎಸ್‌ಎಲ್‌ವಿ ಸಿ-16 ಉಪಗ್ರಹ ವಾಹಕವು ರಿಸೋರ್ಸ್‌ ಸ್ಯಾಟ್‌2, ಯೂತ್‌ ಸ್ಯಾಟ್‌ ಹಾಗೂ ಎಕ್ಸ್‌ ಸ್ಯಾಟ್‌ ಉಪಗ್ರಹಗಳನ್ನು ಯಶಸ್ವಿಯಾಗಿ ಬುಧವಾರ ಕಕ್ಷೆಗೆ ಸೇರಿಸಲಾಗಿದೆ.

ಯಶಸ್ವಿ ಉಡ್ಡಯನದ ಬಳಿಕ ಇಲ್ಲಿನ ಸತೀಶ್‌ ಧವನ್‌ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್‌, ಮೂರೂ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು, ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಳೆದ ವರ್ಷ ಉಪಗ್ರಹ ಉಡಾವಣೆ ವೈಫಲ್ಯದಿಂದ ಕಂಗಾಲಾಗಿದ್ದ ಇಸ್ರೋ ವಿಜ್ಷಾನಿಗಳಿಗೆ ರಿಸೋರ್ಸ್‌ ಸ್ಯಾಟ್‌ ಉಪಗ್ರಹ ಯಶಸ್ವಿ ಉಡ್ಡಯನ ಹೊಸ ಹುಮ್ಮಸ್ಸು ಮೂಡಿಸಿದೆ.

1,206 ಕೆಜಿ ತೂಕ ರಿಸೋರ್ಸ್‌ಸ್ಯಾಟ್ ಈ ಉಪಗ್ರಹವು 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದು, 2003 ರಲ್ಲಿ ಉಡಾಯಿಸಿದ್ದ ರಿಸೋರ್ಸ್‌ ಸ್ಯಾಟ್‌ 1 ಉಪಗ್ರಹದ ಸ್ಥಾನ ತುಂಬಲಿದೆ.

ಕಳೆದ ಡಿಸೆಂಬರ್‌ನಲ್ಲಿ ಉಡಾಯಿಸಿದ್ದ ಸ್ವದೇಶಿ ತಂತ್ರಜ್ಞಾನವನ್ನೊಳಗೊಂಡ ಸಂವಹನ ಉಪಗ್ರಹ ಜಿಸ್ಯಾಟ್‌ 5 ಪಿ ಉಡಾವಣೆಗೊಂಡ ಕೆಲ ಕ್ಷಣಗಳಲ್ಲೇ ಬಂಗಾಳ ಕೊಲ್ಲಿಗೆ ಬಿದ್ದಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ಉಡಾಯಿಸಿದ್ದ ಜಿಸ್ಯಾಟ್‌ 4 ಉಪಗ್ರಹ ಸಹ ವಿಫಲವಾಗಿದ್ದ ಹಿನ್ನೆಲೆಯಲ್ಲಿಯೇ ಈ ವರ್ಷ ದೊರೆತ ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಹೊಸ ಹುರುಪು ಮೂಡಿಸಿದೆ.

ವೆಬ್ದುನಿಯಾವನ್ನು ಓದಿ