ಉತ್ತರಾಖಂಡದಲ್ಲಿ ಮೃತರಾದವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು

ಭಾನುವಾರ, 30 ಜೂನ್ 2013 (10:56 IST)
ಉತ್ತರಖಂಡದಲ್ಲಿ ಭಾರೀ ಅನಾಹುತ ಉಂಟುಮಾಡಿರುವ ಹಠಾತ್‌ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಸತ್ತವರ ಸಂಖ್ಯೆ ಕುರಿತು ಗೊಂದಲದ ವರದಿಗಳು ಬರುತ್ತಿವೆ. 1,000ಕ್ಕಿಂತ ಕಡಿಮೆ ಜನರು ಸತ್ತಿರುವುದಾಗಿ ಅಧಿಕೃತ ಅಂಕಿ-ಅಂಶಗಳು ತಿಳಿಸಿದರೆ ರಾಜ್ಯ ವಿಧಾನಸಭಾಧ್ಯಕ್ಷ ಗೋವಿಂದ್‌ ಸಿಂಗ್‌ ಕುಂಜ್ವಾಲ್‌ ಅವರು ಸಾವಿನ ಸಂಖ್ಯೆ 10,000ನ್ನು ದಾಟಬಹುದೆಂದು ಹೇಳಿದ್ದಾರೆ.

ಉತ್ತರಖಂಡದಲ್ಲಿ ಸಂಭವಿಸಿರುವ ಜಲಪ್ರಳಯಕ್ಕೆ 822 ಮಂದಿ ಬಲಿಯಾಗಿರುವುದಾಗಿ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆಯಾದರೂ ಕುಂಜ್ವಾಲ್‌ ಅವರು ಸತ್ತವರ ಸಂಖ್ಯೆ 10,000 ದಾಟಬಹುದೆಂದು ಅಲ್ಮೋಡದಲ್ಲಿ ಹೇಳಿದರು. 'ಗಡ್‌ವಾಲ್‌ ಪ್ರದೇಶವನ್ನು ಸಂದರ್ಶಿಸಿ ನಾನು ಮರಳುತ್ತಿದ್ದ ವೇಳೆ 4,000-5,000 ಮಂದಿ ಸತ್ತಿರಬಹುದೆಂದು ಭಾವಿಸಿದೆ. ಆದರೆ ಈಗ ಬರುತ್ತಿರುವ ಮಾಹಿತಿ ಪ್ರಕಾರ ಈ ಸಂಖ್ಯೆ 10,000ನ್ನು ದಾಟಬಹುದು' ಎಂದವರು ಸುದ್ದಿಗಾರರಿಗೆ ತಿಳಿಸಿದರು.

ರಕ್ಷಣಾ ಕಾರ್ಯಾಚರಣೆ

ಬೆಳಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ತಡವಾಗಿ ಬದರೀನಾಥ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತು. ಹೆಲಿಕಾಪ್ಟರ್‌ಗಳ ಮೂಲಕ 600 ಮಂದಿ ಮತ್ತು ರಸ್ತೆ ಮೂಲಕ 713 ಮಂದಿಯನ್ನು ರಕ್ಷಿಸಲಾಯಿತು. ರಕ್ಷಿಸಲ್ಪಟ್ಟವರಲ್ಲಿ ಕೆಲ ಹಳ್ಳಿ ಜನರು ಕೂಡ ಸೇರಿದ್ದಾರೆ. ಇನ್ನೂ ಸುಮಾರು 500 ಮಂದಿಯನ್ನು ರಕ್ಷಿಸುವುದಕ್ಕೆ ಬಾಕಿಯಿದೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್‌ ಕುಮಾರ್‌ ಹೇಳಿದರು.

ಆವಶ್ಯಕ ಸಾಮಗ್ರಿಗಳ ಪೂರೈಕೆ

ರುದ್ರಪ್ರಯಾಗ, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳ 600ಕ್ಕೂ ಅಧಿಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿದುಹೋಗಿದ್ದು ಆವಶ್ಯಕ ಸಾಮಗ್ರಿಗಳ ಪೂರೈಕೆಗೆ ಸಮರೋಪಾದಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಹಳ್ಳಿಗಳಿಗೆ ಈತನಕ 2,379 ಮೆಟ್ರಿಕ್‌ ಟನ್‌ ಗೋಧಿ ಮತ್ತು 2,875 ಮೆಟ್ರಿಕ್‌ ಟನ್‌ ಅಕ್ಕಿಯನ್ನು ರವಾನಿಸಲಾಗಿದೆ. ಪರಿಹಾರ ಸಾಮಗ್ರಿಗಳನ್ನು ಆಗಸಮಾರ್ಗ ಮೂಲಕ ಮಾತ್ರ ಒಯ್ಯಲು ಸಾಧ್ಯವಿದ್ದು ಆಗಾಗ ಬದಲಾಗುತ್ತಿರುವ ಹವಾಮಾನ ಈ ಕೆಲಸಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

ರಸ್ತೆ ಜಾಲಕ್ಕೆ ತೀವ್ರ ಹಾನಿ

ಉತ್ತರಖಂಡದಲ್ಲಿ ರಸ್ತೆ ಜಾಲಕ್ಕೆ ತೀವ್ರ ಹಾನಿ ತಟ್ಟಿದೆ. ತೆಹ್ರಿಯಲ್ಲಿ 259, ಡೆಹ್ರಾಡೂನ್‌ನಲ್ಲಿ 139, ಉತ್ತರಕಾಶಿಯಲ್ಲಿ 132, ಚಮೋಲಿಯಲ್ಲಿ 110 ಮತ್ತು ರುದ್ರಪ್ರಯಾಗದಲ್ಲಿ 71 ರಸ್ತೆಗಳು ಹಾನಿಗೀಡಾಗಿವೆ.
ಭಾಗೀರಥಿ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿತೀರದ 200ಕ್ಕೂ ಅಧಿಕ ಕುಟುಂಬಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕೇದಾರನಾಥ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆ ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡಚಣೆಯಾಗಿದೆ.

ಸಾಮೂಹಿಕ ಅಂತ್ಯಸಂಸ್ಕಾರ

ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಡೆಗಟ್ಟಲು ಶನಿವಾರ ಕೂಡ 34 ಶವಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು. ಅವಶೇಷಗಳಡಿ ಶವಗಳು ಕೊಳೆಯುತ್ತಿರುವುದರಿಂದ ಮತ್ತು ಕೆಲ ಶವಗಳು ಗಂಗಾನದಿಯಲ್ಲಿ ತೇಲಿಹೋಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ಹೆಚ್ಚಾಗಿದ್ದು ನಿವಾರಣಾ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ವೈದ್ಯರ ತಂಡಗಳನ್ನು ಕಳುಹಿಸಲಾಗಿದೆ.

ಪೈಲಟ್‌ ಅಂತ್ಯಸಂಸ್ಕಾರ

ಉತ್ತರಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್‌ ಪತನಗೊಂಡು ಸಾವಿಗೀಡಾಗಿದ್ದ ಐಎಎಫ್ ಪೈಲಟ್‌ ಕೆ.ಪ್ರವೀಣ್‌ ಅವರ ಅಂತ್ಯಸಂಸ್ಕಾರವನ್ನು ಅವರ ಹುಟ್ಟೂರು ಮಧುರೆಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲಾಯಿತು.

ವೆಬ್ದುನಿಯಾವನ್ನು ಓದಿ