ಉತ್ತರ ಭಾರತೀಯರನ್ನು ನಾವು ರಕ್ಷಿಸುತ್ತೇವೆ: ಆರ್‌ಎಸ್‌ಎಸ್

ಭಾನುವಾರ, 31 ಜನವರಿ 2010 (16:03 IST)
ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ್ ಸೇನೆ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಮಹಾರಾಷ್ಟ್ರದಲ್ಲಿನ ಉತ್ತರ ಭಾರತೀಯರನ್ನು ಸಂಘದ ಕಾರ್ಯಕರ್ತರು ರಕ್ಷಿಸಬೇಕು ಎಂದು ಭಾನುವಾರ ಬಹಿರಂಗವಾಗಿ ಕರೆ ನೀಡುವ ಮೂಲಕ ಸೇನೆಯ ಹಿಂದಿ ವಿರೋಧಿ ಧೋರಣೆಗೆ ಸೆಡ್ಡು ಹೊಡೆಯುವ ನಿಲುವು ತಳೆದಿದೆ.

ಉತ್ತರ ಭಾರತೀಯ ವಿರೋಧಿ ಧೋರಣೆಯಿಂದ ನಡೆಸುತ್ತಿರುವ ಹಲ್ಲೆಯನ್ನು ಮಹಾರಾಷ್ಟ್ರದ ಆರ್‌ಎಸ್‌ಎಸ್ ಕಾರ್ಯಕರ್ತರು ತಡೆಯುವ ಸಾಹಸಕ್ಕೆ ಮುಂದಾಗಬೇಕೆಂದು ಆರ್‌ಎಸ್‌ಎಸ್ ಮುಖಂಡ ರಾಮ್ ಮಾಧವ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಭಾಷೆಯ ಮೇಲೆ ತಾರತಾಮ್ಯ ನಡೆಸುವ ಧೋರಣೆಯನ್ನು ಸಂಘ ಪರಿವಾರ ತೀವ್ರವಾಗಿ ವಿರೋಧಿಸುತ್ತದೆ ಎಂದ ಅವರು, ಈ ಸೂಕ್ಷ್ಮ ವಿಷಯದ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಭಾಷೆಯ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಾದ ಕ್ರಮವಲ್ಲ ಎಂದರು. ಹಿಂದಿ ಭಾಷಿಕರ ಮತ್ತು ಉತ್ತರ ಭಾರತೀಯರ ವಿರುದ್ಧ ಶಿವಸೇನೆ ಮತ್ತು ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದಾಳಿ ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಮಾಧವ್ ಅವರು ಇಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಭಾರತದ ಕುರಿತಂತೆ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸಂಘಪರಿವಾರಕ್ಕೆ ಅದರದ್ದೇ ಆದ ದೃಷ್ಟಿಕೋನವನ್ನು ಹೊಂದಿರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ