ಉಳಿದ 7 ಮಂದಿ ಕಸಬ್‌ನ ಸಹಚರರು ಎಲ್ಲಿ?

ಗುರುವಾರ, 18 ಡಿಸೆಂಬರ್ 2008 (11:43 IST)
ND
ನವೆಂಬರ್ 26ರಂದು ಮುಂಬೈ ದಾಳಿ ನಡೆಸಲು ಆಗಮಿಸಿದ ವೇಳೆ ಅಲ್-ಹುಸೈನಿ ಹಡಗಿನಲ್ಲಿ 17 ಮಂದಿ ಪಾಕಿಸ್ತಾನಿ ಭಯೋತ್ಪಾದಕರು ಇದ್ದರೆಂದು ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್ ಹೇಳಿದ್ದಾನೆ.

ಹತ್ತುಮಂದಿ ಭಯೋತ್ಪಾದಕರು ಮೀನುಗಾರಿಕಾ ದೋಣಿ ಕುಬೇರ್ ಅನ್ನು ಅಪಹರಿಸಿ ಮುಂಬೈಯತ್ತ ಪ್ರಯಾಣ ಬೆಳೆಸಿದ್ದರೆ, ಉಳಿದ ಏಳು ಮಂದಿಯನ್ನು ಅಲ್-ಹುಸೈನಿಯಲ್ಲಿ ಉಳಿಯಲು ಹೇಳಲಾಗಿತ್ತು ಎಂದು ಕಸಬ್ ತನಿಖೆಯ ವೇಳೆ ಹೇಳಿದ್ದಾನೆನ್ನಲಾಗಿದೆ. ಈ ಏಳು ಮಂದಿ ಗುಜರಾತಿನ ಸುತ್ತಮುತ್ತ ಅಡಗಿದ್ದು ಇನ್ನೊಂದು ದಾಳಿಗೆ ತಯಾರಿ ನಡೆಸುತ್ತಿರಬಹುದು ಎಂಬುದೀಗ ಕೈಂ ಬ್ರಾಂಚ್ ಅಧಿಕಾರಿಗಳ ಭೀತಿ.

ಲಷ್ಕರೆ ಮುಖ್ಯಸ್ಥ ಝರಿ ಉರ್ ರೆಹ್ಮಾನ್ ನೇತೃತ್ವದಲ್ಲಿ 17 ಮಂದಿ ಉಗ್ರರು ಅಝಿಜಾಬಾದ್ ಬಂದರಿಗೆ ನವೆಂಬರ್ 24ರಂದು ತೆರಳಿದ್ದರು. ಅಲ್ಲಿಂದ 17 ಉಗ್ರರು ಮುಂಬೈಯತ್ತ ಯಾನ ಬೆಳೆಸಿದ್ದರು.

ಭಾರತೀಯ ಪ್ರಾಂತ್ಯ ತಲುಪುತ್ತಲೇ ಭಾರತೀಯ ಬೋಟನ್ನು ಅಪಹರಿಸಲು ಇವರಿಗೆ ಸೂಚನೆ ನೀಡಲಾಗಿತ್ತು. ಪಾಕಿಸ್ತಾನಿ ವ್ಯಾಪ್ತಿಯಲ್ಲಿರುವಾಗಲೇ ಇವರ ಕಣ್ಣಿಗೆ ಕುಬೇರ್ ದೋಣಿ ಬಿದ್ದಿದ್ದು ಅದನ್ನು ಅಪಹರಿಸಿದ್ದರು. ಇದಲ್ಲದೆ ಭಾರತೀಯ ಪ್ರಾಂತ್ಯಕ್ಕೆ ತಲುಪುತ್ತಲೆ ತಮ್ಮ ಕೈಗೆ ಕೆಂಪು ದಾರಗಳನ್ನು ಕಟ್ಟಿಕೊಳ್ಳಲೂ ಅವರಿಗೆ ಸೂಚಿಸಲಾಗಿತ್ತಂತೆ.

ಕುಬೇರ್ ಬೋಟಿನಲ್ಲಿದ್ದ ಇತರ ನಾಲ್ಕು ಮಂದಿಯನ್ನು ಅಲ್ ಹುಸೈನಿ ಹಡಗಿಗೆ ಸ್ಥಳಾಂತರಿಸಿದ್ದು, ಕ್ಯಾಪ್ಟನ್ ಅಮರ್‌ಸಿನ್ಹಾ ತಂಡೇಲ್‌ಗೆ ಇವರನ್ನು ಮುಂಬೈಗೆ ಕರೆದೊಯ್ಯುವಂತೆ ಹೇಳಲಾಗಿತ್ತು. ಮೊದಲಿನ ಯೋಜನೆಯಂತೆ ಎಲ್ಲಾ 17 ಮಂದಿಯೂ ಕುಬೇರ್ ಬೋಟನ್ನೇರಿ ಮುಂಬೈಗೆ ಬರಬೇಕಿತ್ತು. ಆದರೆ, ಕೊನೆ ಗಳಿಗೆಯಲ್ಲಿ ರೆಹ್ಮಾನ್ ಸೆಟಲೈಟ್ ಪೋನ್ ಮುಖಾಂತರ ಕರೆನೀಡಿ ಏಳು ಮಂದಿ ಅಲ್-ಹುಸೈನ್ ಹಡಗಿನಲ್ಲಿ ಮರಳುವಂತೆ ಸೂಚಿಸಿದ್ದ ಎನ್ನಲಾಗಿದೆ.

ಆದರೆ ಈ ಏಳು ಮಂದಿ ಎಲ್ಲಿದ್ದಾರೆಂದು ತನಗೆ ತಿಳಿದಿಲ್ಲ ಎಂದು ಕಸಬ್ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ